ಮೇವು ಬ್ಯಾಂಕ್‌ ಆರಂಭಿಸುವಂತೆ ರೈತಸಂಘ ಪ್ರತಿಭಟನೆ

| Published : Apr 16 2024, 01:03 AM IST

ಸಾರಾಂಶ

ಜಾನುವಾರುಗಳಿಗೆ ಮೇವು ಬ್ಯಾಂಕ್‌ ಆರಂಭಿಸಬೇಕು ಹಾಗೂ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ರೈತಸಂಘ, ಹಸಿರು ಸೇನೆಯ ಕಾರ್ಯಕರ್ತರು ಪಟ್ಟಣದಲ್ಲಿ ಎತ್ತಿನಗಾಡಿಗಳೊಂದಿಗೆ ನೂರಾರು ಮಂದಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಾನುವಾರುಗಳಿಗೆ ಮೇವು ಬ್ಯಾಂಕ್‌ ಆರಂಭಿಸಬೇಕು ಹಾಗೂ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿ ರೈತಸಂಘ, ಹಸಿರು ಸೇನೆಯ ಕಾರ್ಯಕರ್ತರು ಪಟ್ಟಣದಲ್ಲಿ ಎತ್ತಿನಗಾಡಿಗಳೊಂದಿಗೆ ನೂರಾರು ಮಂದಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಎತ್ತಿನಗಾಡಿಗಳೊಂದಿಗೆ ರೈತಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂದೆ ಕೆಲ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು. ನಂತರ ತಾಲೂಕು ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ದಿಕ್ಕಾರದ ಘೋಷಣೆಗಳನ್ನು ಕೂಗಿ ರೈತರು ಆಕ್ರೋಶ ಹೊರ ಹಾಕಿದರು.

ರಾಜ್ಯ ರೈತಸಂಘ , ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ ನಾವು ಬ್ರಿಟಿಷರ ಆಡಳಿತದಲ್ಲಿ ಇಲ್ಲ. ನಾವು ನಮ್ಮ ಹಕ್ಕು ಕೇಳಲು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.ಜಿಲ್ಲಾಡಳಿತ ಕೆರೆಗಳಿಗೆ ನೀರು ತುಂಬಿಸಲು ಮಂದಾಗಬೇಕು:

ಬರ ಪೀಡಿತ ತಾಲೂಕಲ್ಲಿ ಮೇವು ಕೊಡಲು ಜಿಲ್ಲಾಡಳಿತ ಮುಂದಾಗಿಲ್ಲ. ಮೇವು ಪೂರೈಕೆ ಬಗ್ಗೆಯೂ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಚುನಾಯಿತ ಜನಪ್ರತಿನಿಧಿಗಳು ಕೂಡ ಮೌನ ವಹಿಸುವ ಬದಲು ಮೇವು ಹಾಗೂ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಲಿ ಎಂದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ರೈತಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ತಾಲೂಕಿನಲ್ಲಿ ಹೈನುಗಾರಿಕೆ ರೈತರಿಗೆ ಉಪ ಕಸುಬಾಗಿದೆ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಮೇವು ಒದಗಿಸಬೇಕು. ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ಹುತ್ತೂರು ಕೆರೆಯಿಂದ ಮುಂದಿನ ೮ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಸಾಲಿನ ರೈತರ ವಿವಿಧ ಫಸಲಿಗೆ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ಬೆಳೆ ವಿಮೆ ಪಾವತಿಸಲಾಗಿದ್ದರೂ ವಿಮೆ ಹಣ ಪಾವತಿಯಾಗಿಲ್ಲ ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿದರು. ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ವಿಧವಾ ವೇತನ,ಸಂದ್ಯಾ ಸುರಕ್ಷಾ,ವಿಕಲ ಚೇತನ,ಮನಸ್ವಿನಿ ಯೋಜನೆಗಳ ಹಣ ಬಂದಿಲ್ಲ ಕೂಡಲೇ ಫಲಾನುಭವಿಗಳಿಗೆ ಹಣ ಜಮಾ ಮಾಡಬೇಕು ಎಂದರು.

ನಿರ್ಲಕ್ಷ್ಯಕ್ಕೆ ಖಂಡನೆ: ಮೇಲ್ಕಂಡ ಬೇಡಿಕೆಗಳ ಈಡೇರಿಸಬೇಕು ಎಂದು ರೈತಸಂಘ ಚಳುವಳಿ ಮಾಡುತ್ತ ಬಂದಿದ್ದರೂ ಸಮಸ್ಯೆಗಳು ಬಗೆಹರಿಸಲು ಜಿಲ್ಲಾಡಳಿತ ವಿಫಲವಾಗಿದೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಸಿ ಭರವಸೆ: ರೈತಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿಕಾರಿ ಶಿವಮೂರ್ತಿ ರೈತರು ಬೇಡಿಕೆ ಆಲಿಸಿದ ಬಳಿಕ ಮಾತನಾಡಿ ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ಬಳಿಕ ರೈತರು ಪ್ರತಿಭಟನೆ ನಿಲ್ಲಿಸಿದರು.

ಜಾನುವಾರುಗಳಿಗೆ ಮೇವಿನ ವಿಚಾರ ಸಂಬಂಧ ಟಾಸ್ಕ್‌ ಪೋರ್ಸ್‌ ಸಮಿತಿ ಸಭೆ ನಡೆದಿದ್ದು, ಮೂರ್ನಾಲ್ಕು ದಿನಗಳಲ್ಲಿ ಮೇವಿನ ಬ್ಯಾಂಕ್‌ ಆರಂಭಿಸಲಾಗುವುದು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಸಂಬಂಧ ಸದ್ಯದಲ್ಲೇ ಜಿಲ್ಲಾಧಿಕಾರಿಗಳು ಸಭೆ ನಡೆಸಲಿದ್ದಾರೆ ಅಂದಿನ ತೀರ್ಮಾನ ತಿಳಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಟಿ.ಎಸ್. ಶಾಂತಮಲ್ಲಪ್ಪ, ಹಂಗಳಮಾಧು, ದಿಲೀಪ್‌, ಲೋಕೇಶ್‌ ಹಾಗೂ ಮತ್ತಿತರರಿದ್ದರು.

ಎಚ್‌ಡಿಕೆ ಕ್ಷಮೆ ಕೇಳಲು ರೈತಸಂಘ ಆಗ್ರಹ

ಗುಂಡ್ಲುಪೇಟೆ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಆಡಿದ ಮಾತಿಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ರಾಜ್ಯ ರೈತಸಂಘ, ಹಸಿರು ಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರ ಬಾಯಲ್ಲಿ ಇಂತ ಮಾತು ಬರಬಾರದಿತ್ತು ವಿಷಾಧದ ಬದಲು ಕ್ಷಮೆ ಕೇಳಲಿ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದೆ ಇದು ಸರಿಯೋ, ತಪ್ಪೋ ಬೇರೆ ವಿಚಾರ ಆದರೆ ಅಸಮಾನತೆ, ಬಡತನ ಇರುವಾಗ ಗ್ಯಾರಂಟಿ ಬೇಕಾಗಿದೆ ಅಸಮಾನತೆ ಹೋದಾಗ ಗ್ಯಾರಂಟಿಯಂತ ಯೋಜನೆ ನಿಲ್ಲಲಿ ಎಂದು ಪ್ರತಿಪಾದಿಸಿದರು.