ಬ್ಯಾಡಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ನೂರಾರು ರೈತರು ಗುರುವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ರುದ್ರನಗೌಡ ಕಾಡನಗೌಡ್ರ, ಕೃಷಿ ಪ್ರಧಾನವಾದ ಬ್ಯಾಡಗಿ ತಾಲೂಕಿನಲ್ಲಿ ರೈತರು ಗೊಬ್ಬರ, ಬೀಜ, ವಿದ್ಯುತ್, ಬೆಳೆ ವಿಮೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾಲೂಕಿನಲ್ಲಿ ಯಾವುದೇ ಕೈಗಾರಿಕೆಗಳಿಲ್ಲದೆ ರೈತರು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದ್ದು, ಉತ್ತಮ ಮಳೆಯಾದರೆ ಬೆಲೆ ಕುಸಿತ ಹಾಗೂ ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ನಷ್ಟದಂತಹ ಸಮಸ್ಯೆಗಳು ರೈತರನ್ನು ಕಂಗೆಡಿಸಿದೆ. ಜಿಲ್ಲೆಯಲ್ಲಿ ನಾಲ್ಕು ನದಿಗಳಿದ್ದರೂ ಬ್ಯಾಡಗಿ ತಾಲೂಕಿಗೆ ಸಮರ್ಪಕ ನೀರಾವರಿ ಸೌಲಭ್ಯ ಕಲ್ಪಿಸಲು ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.

ಕಳಪೆ ಬೀಜ ವಿರುದ್ಧ ಕ್ರಮ ಕೈಗೊಳ್ಳಿ: ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಾಂಪ್ಲೆಕ್ಸ್ ಗೊಬ್ಬರದ ದರ ಏರಿಕೆ, ಖಾಸಗಿ ಗೊಬ್ಬರ ಮಾರಾಟಗಾರರ ಲಿಂಕ್ ಪದ್ಧತಿ, ಎಫ್‌ಐಡಿ ವ್ಯವಸ್ಥೆಯ ತಾಂತ್ರಿಕ ದೋಷಗಳಿಂದ ರೈತರಿಗೆ ಗೊಬ್ಬರ ಸಿಗದಿರುವುದು, ಮುಸುಕಿನ ಜೋಳದ ಬೀಜಗಳ ಬೆಲೆ ನಿಯಂತ್ರಣದ ಕೊರತೆ ಹಾಗೂ ಕಳಪೆ ಬೀಜಗಳ ಮಾರಾಟದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಬಾರ್‌ಕೋಡ್ ವ್ಯವಸ್ಥೆ ಜಾರಿಗೊಳಿಸಿ: ಗಂಗಣ್ಣ ಯಲಿ ಮಾತನಾಡಿ, ಅರಣ್ಯಭೂಮಿ ಹಾಗೂ ಬಗರ್ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗೊಬ್ಬರ ಮತ್ತು ಬೀಜಗಳ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಬೀಜಗಳ ಅಸಲಿತನ ಮತ್ತು ನಿಗದಿತ ದರವನ್ನು ರೈತರು ಮೊಬೈಲ್ ಮೂಲಕವೇ ಪರಿಶೀಲಿಸಲು ಕ್ಯೂಆರ್ ಕೋಡ್ ಅಥವಾ ಬಾರ್‌ಕೋಡ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಕೈಬಿಡಿ:


ಮೌನೇಶ ಕಮ್ಮಾರ ಮಾತನಾಡಿ, ಅಕಾಲಿಕ ಮಳೆ ಹಾಗೂ ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಬಾಕಿ ಇರುವ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳ ಉಚಿತ ವಿದ್ಯುತ್ ಯೋಜನೆ ಮುಂದುವರಿಸಬೇಕು ಹಾಗೂ ವಿದ್ಯುತ್ ಇಲಾಖೆಯ ಖಾಸಗೀಕರಣ ಮತ್ತು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆಗೆ ಸ್ಪಂದಿಸಿ: ಕೆ.ವಿ. ದೊಡ್ಡಗೌಡ್ರ ಮಾತನಾಡಿ, ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ “ನಮ್ಮ ಹೊಲ ನಮ್ಮ ದಾರಿ” ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ನೀಡುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ರೂಪಿಸಬೇಕು ಎಂದರು.

ಚಿಕ್ಕಪ್ಪ ಚಿತ್ರದ, ಶಿವಯೋಗಿ ಹೊಸಗೌಡ್ರ, ಮೌನೇಶ ಕಮ್ಮಾರ, ಶಿವರುದ್ರಪ್ಪ ಮೂಡವಿ, ಜಾನ್ ಪುನೀತ್, ಸುಭಾ ಷ್ ಬನ್ನಿಹಟ್ಟಿ, ಫಕ್ಕೀರೇಶ, ಈರನಗೌಡ ಪಾಟೀಲ, ಅಶೋಕ ಮತ್ತೂರ ಉಪಸ್ಥಿತರಿದ್ದರು.

ಜೈಲ್‌ ಭರೋ ಚಳವಳಿ: ಎಚ್ಚರಿಕೆ

ಜೂ. 10ರೊಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ, ಗೊಬ್ಬರ ಹೋರಾಟದಲ್ಲಿ ಬಲಿದಾನಗೊಂಡ ನೆಲೋಗಲ್ ಗ್ರಾಮದ ಪುಟ್ಟಪ್ಪ ಹೊನ್ನತ್ತಿ ಹಾಗೂ ಸಿದ್ದಲಿಂಗಪ್ಪ ಚೂರಿ ಅವರ ಸ್ಮರಣಾರ್ಥ ರೈತ ಹೋರಾಟ ದಿನ ಆಚರಿಸಿ, ಹೆದ್ದಾರಿ ಬಂದ್ ಹಾಗೂ ಜೈಲ್ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.