ಬೆಳೆಹಾನಿ ಪರಿಹಾರಕ್ಕೆ ಒತ್ತಾಯಿಸಿ ಇಂದು ರೈತಸಂಘ ಪ್ರತಿಭಟನೆ

| Published : Aug 25 2025, 01:00 AM IST

ಸಾರಾಂಶ

ಮುಂಡರಗಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಎಲ್ಲ ಬೆಳೆಗಳಿಗೆ ಬೆಳೆ ಪರಿಹಾರ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ಆ. 25ರಂದು ಬೆಳಗ್ಗೆ 11 ಗಂಟೆಗೆ ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ

ಮುಂಡರಗಿ: ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಎಲ್ಲ ಬೆಳೆಗಳಿಗೆ ಬೆಳೆ ಪರಿಹಾರ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ಆ. 25ರಂದು ಬೆಳಗ್ಗೆ 11 ಗಂಟೆಗೆ ರೈತ ಸಂಘದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಇಟಗಿ ಹೇಳಿದರು.

ಅವರು ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಾಲೂಕಿನಲ್ಲಿ ಅತಿವೃಷ್ಟಿ ಮಳೆಯಿಂದ ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ, ಶೇಂಗಾ, ಭತ್ತ, ಉಳ್ಳಾಗಡ್ಡಿ ಹಾಗೂ ಇತರೆ ಬೆಳೆಗಳು ನಾಶವಾಗಿದ್ದು, ಎಲ್ಲಾ ಬೆಳೆಗಳಿಗೂ ಶೀಘ್ರವೇ ಬೆಳೆ ಪರಿಹಾರ ಕೊಡುವುದರ ಜತೆಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಹಣವನ್ನು ಬಿಡುಗಡೆ ಮಾಡಬೇಕು ಎಂದರು.

ಸೂರ್ಯಕಾಂತಿ, ಮೆಕ್ಕೆ ಜೋಳಕ್ಕೆ ಶೀಘ್ರವೇ ಖರೀದಿ ಕೇಂದ್ರ ತೆರೆಯಬೇಕು. ಕಾರಣ ಈಗಾಗಲೇ ಮಾರುಕಟ್ಟೆಗೆ ಸೂರ್ಯಕಾಂತಿ, ಮೆಕ್ಕೆಜೋಳ ಬರುತ್ತಿದ್ದು ಈಗಿನ ಸದ್ಯ ಮುಂಡರಗಿ ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದು ಖರೀದಿ ಕೇಂದ್ರದಲ್ಲಿ ಉತ್ತಮವಾದ ದರ ಸಿಗಲಿದ್ದು, ತಕ್ಷಣವೇ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಯೂರಿಯಾ ಗೊಬ್ಬರವನ್ನು ಎಲ್ಲ ರೈತರಿಗೂ ಸಮಪರ್ಕವಾಗಿ ಸಿಗುವಂತಾಗಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಹುಸೇನಸಾಬ್ ಕುರಿ, ಶರಣಪ್ಪ ಚೆನ್ನಳ್ಳಿ, ಚಂದ್ರಪ್ಪ ಗದ್ದಿ, ಚಂದ್ರಪ್ಪ ಬಳ್ಳಾರಿ, ಹುಚ್ಚಪ್ಪ ಹಂದ್ರಾಳ, ರವಿ ಹಡಪದ, ಅಶೋಕ ಬನ್ನಿಕೊಪ್ಪ, ಭೀಮೇಶ ಬಂಡಿವಡ್ಡರ,ನಿಂಗಪ್ಪ ಬಂಡಾರಿ ಸೇರಿ ಅನೇಕರು ಉಪಸ್ಥಿತರಿದ್ದರು.