ಸಾರಾಂಶ
ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಬುಧವಾರ ನೆರೆದ ಕಾರ್ಯಕರ್ತರು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಹಲವು ದಿನಗಳಿಂದ ಜನರೇಟರ್ ಕೆಟ್ಟು ರೋಗಿಗಳು ಮೇಣದ ಬೆಳಕಿನಲ್ಲಿ ಚಿಕಿತ್ಸೆ ಪಡೆಯುವಂಥ ಸ್ಥಿತಿ ನಿರ್ಮಾಣ ವಾಗಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜನರೇಟರ್ ಸಮಸ್ಯೆ ಪರಿಹರಿಸುವತ್ತ ಮುಂದಾಗುತ್ತಿಲ್ಲ ಎಂದು ದೂರಿದರಲ್ಲದೆ, ಆಸ್ಪತ್ರೆಯಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ರೋಗಿಗಳು ಬೇರೆ ಕಡೆ ಕರೆದೊಯ್ಯುವಾಗ ಪ್ರಾಣ ಕಳೆದು ಕೊಂಡಿ ರುವ ಉದಾಹರಣೆಗಳೂ ಸಾಕಿಷ್ಟಿವೆ ಎಂದಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸಾ ಸೌಲಭ್ಯಗಳು ಇಲ್ಲದಾಗಿದೆ. ಅಲ್ಲಿನ ಸಿಬ್ಬಂದಿ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರೂ ಸಕಾಲಕ್ಕೆ ವೇತನ ದೊರಕದೆ ಪರಿತಪಿಸುವಂತಾಗಿದೆ. ಆಸ್ಪತ್ರೆಯಲ್ಲಿನ ಕೆಲ ಸಿಬ್ಬಂದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಸೇವೆ ಸಲ್ಲಿರುವ ನೌಕರರನ್ನು ಬೇರೆ ಕಡೆ ನಿಯೋಜಿಸಬೇಕು ಎಂದಿದ್ದಾರೆ.ತುರ್ತು ಮತ್ತು ಡಯಾಲಿಸಿಸ್ ಕೊಠಡಿಗಳಿಗೆ ಪ್ರತ್ಯೇಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಜತೆಗೆ ಒಳ ಮತ್ತು ಹೊರ ರೋಗಿ ಗಳಿಗೆ ಸಮರ್ಪಕವಾಗಿ ಔಷಧಗಳನ್ನು ವಿತರಿಸಬೇಕು. ತುರ್ತು ಸಂದರ್ಭಕ್ಕೆ ಪ್ರತ್ಯೇಕವಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡ ಬೇಕು. ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ನೇಮಕ ಮಾಡುವ ಜತೆಗೆ ಹೆಚ್ಚುವರಿಯಾಗಿ ಪ್ರಸೂತಿ ತಜ್ಞರನ್ನು ನಿಯೋಜಿಸಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ವೈದ್ಯರು ಸಕಾಲಕ್ಕೆ ಆಗಮಿಸಿ ಸೇವೆ ಸಲ್ಲಿಸ ಬೇಕು. ಡಿ.ಗ್ರೂಪ್ ಸಿಬ್ಬಂದಿ ಕೂಡಲೆ ವೇತನ ಬಿಡುಗಡೆ ಜತೆಗೆ ಆಸ್ಪತ್ರೆಯಲ್ಲಿನ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಆರ್.ಬಿ.ನಿಜಲಿಂಗಪ್ಪ,ತಾಲೂಕು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಗೌರವಾಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಪಿ.ತಿಪ್ಪೇಸ್ವಾಮಿ, ಬಸವರಾಜ, ಶಿವಾನಂದಪ್ಪ, ಬೆಲ್ಲದ ಮಲ್ಲಯ್ಯ, ದಡ್ಡಿ ಸೂರನಾಯಕ, ಮರ್ಲಹಳ್ಳಿ ದಡ್ಡಯ್ಯ, ಕಾರ್ಯದರ್ಶಿ ಈರಣ್ಣ ಇದ್ದರು.