ಕನ್ನಡಪ್ರಭ ವಾರ್ತೆ ಪಾವಗಡ
ಅನ್ನದಾತ ರೈತ, ಈ ದೇಶದ ಬೆನ್ನೆಲುಬು ರೈತ ಹಾಗೂ ಜನಸಾಮಾನ್ಯರ ಹಿತ ರಕ್ಷಣೆ ಹಿನ್ನಲೆ ಸಂಘಟಿತರಾಗಿ ಪಕ್ಷಾತೀತವಾಗಿ ಹೋರಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ದೊಡ್ಡಹಟ್ಟಿಯ ಪೂಜಾರಪ್ಪ ಕರೆ ನೀಡಿದರು.ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ವ್ಯಾಪ್ತಿಯ ಚಿಕ್ಕಜಾಲೊಡು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಘಟಕದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ರೈತರ ಪ್ರಗತಿಗೆ ಒಗ್ಗಟ್ಟಿನಿಂದ ಹೋರಾಡಬೇಕು. ಸರ್ಕಾರದ ಸೌಲಭ್ಯ ಪ್ರತಿಯೊಬ್ಬ ರೈತನಿಗೂ ಸಿಗಬೇಕು. ಸರ್ಕಾರದ ರೈತ ಪರ ಯೋಜನೆಗಳು ಹೆಚ್ಚು ರೂಪಿಸಬೇಕು. ರೈತ ಬೆಳೆದರೆ ದೇಶಕ್ಕೆ ಅನ್ನ ನೀಡಲು ಸಾಧ್ಯ. ಈ ಹಿನ್ನಲೆಯಲ್ಲಿ ರೈತರಿಗೆ ಉತ್ತೇಜನ ನೀಡುವಂತೆ ಕಾರ್ಯಕ್ರಮಗಳು ಜಾರಿಗೆ ಬರುಬೇಕೆಂದರು.ಇಲ್ಲಿನ ಸ್ಥಳೀಯ ರೈತರ ಧ್ವನಿಯನ್ನು ಬಲಪಡಿಸುವ ಉದ್ದೇಶದಿಂದ ನೂತನ ರೈತ ಸಂಘದ ಘಟಕವನ್ನು ಸ್ಥಾಪಿಸಲಾಗಿದೆ ಎಂದರು.ರೈತರು ಸಂಘಟಿತರಾಗಿ ಸರ್ಕಾರದಿಂದ ಬರುವ ಯೋಜನೆಗಳು ಸಮರ್ಪಕವಾಗಿ ರೈತರಿಗೆ ತಲುಪುವಂತೆ ಧ್ವನಿ ಎತ್ತಬೇಕು. ಬರಪೀಡಿತ ಪ್ರದೇಶವಾದ ಈ ತಾಲೂಕಿನಲ್ಲಿಗ ಶಾಶ್ವತ ನೀರಾವರಿ ಯೋಜನೆಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳು ಜಾರಿಯಾಗಿಲ್ಲ. ರೈತರು ಹಾಗೂ ಹಲವಾರು ಪ್ರಗತಿಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರವು ಶಾಶ್ವತ ಕುಡಿಯುವ ನೀರಿನ ಅನುಷ್ಠಾನಕ್ಕಾಗಿ 2,352 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಇದೇ ರೀತಿ ರೈತರ ಬೆಳೆಗಳ ಸಂರಕ್ಷಣೆ ಹಿನ್ನಲೆಯಲ್ಲಿ ಕೊಳವೆಬಾವಿಗಳ ಅಂತರ್ ಜಲ ಹೆಚ್ಚಿಸಲು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತ ಗೊಳಿಸಬೇಕು. ಪೈಪ್ ಲೈನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರೈತರಿಗೆ ನೀರು ಹರಿಸಬೇಕೆಂದು ಅವರು ಆಗ್ರಹಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವು ಮಾತನಾಡಿ, ಚಿಕ್ಕಜಾಲೊಡು ಗ್ರಾಮದ ನೂತನ ಘಟಕ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಲಿದೆ. ರೈತರ ಹಿತದೃಷ್ಟಿಯಿಂದ ಹೋರಾಟಗಳನ್ನು ಚುರುಕುಗೊಳಿಸಲು ಸಂಘ ಸದಾ ಕಾರ್ಯನಿರ್ವಹಿಸಲಿದೆ ಎಂದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಾಂಜಿ, ಸದಸ್ಯರಾದ ಗೋಪಾಲ್, ಹೊನ್ನೂರಪ್ಪ,ತಿಪ್ಪೇ ಸ್ವಾಮಿ, ಜಾಲೊಡು ಹನುಮಂತರಾಯ,ಈರಣ್ಣ,ನರಸಿಂಹಪ್ಪ,ಹನುಮಂತರಾಯಪ್ಪ, ರಂಗಪ್ಪ ರಾಮಾಂಜಿನಪ್ಪ ಇತರೆ ಅನೇಕ ಮಂದಿ ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.