ಸಾರಾಂಶ
ಎಸ್.ಜಿ. ತೆಗ್ಗಿನಮನಿ ನರಗುಂದ
ತಾಲೂಕಿನಲ್ಲಿ ಪ್ರಸಕ್ತ ವರ್ಷ ಹಿಂಗಾರು ಬಿತ್ತನೆಗೆ ಉತ್ತಮ ಮಳೆಯಾಗಿದೆ. ಆದರೆ ಬಿತ್ತನೆ ಮಾಡಲು ಡಿಎಪಿ ರಾಸಾಯನಿಕ ಗೊಬ್ಬರ ಸಿಗದೆ ರೈತರು ಅಲೆದಾಡುವ ಸ್ಥಿತಿ ಬಂದಿದೆ.ತಾಲೂಕಿನ ರೈತ ಸಮುದಾಯ ಹೆಚ್ಚು ಕೃಷಿ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಅಲ್ಪಸ್ವಲ್ಪ ಮಳೆಯಲ್ಲಿ ಹೆಸರು, ಗೋವಿನ ಜೋಳ ಬೆಳೆ ಬೆಳೆದು ಕಟಾವು ಮಾಡಿ ಹಿಂಗಾರು ಬಿತ್ತನೆ ಮಾಡಲು ರೈತ ಸಮುದಾಯ ಸಜ್ಜಾಗಿದೆ. ಆದರೆ ಹಿಂಗಾರು ಬಿತ್ತನೆಗೆ ಬೇಕಾಗಿರುವ ಡಿಎಪಿ, 10.26.26. 20.20.20 ಗೊಬ್ಬರ ಸದ್ಯ ತಾಲೂಕಿನಲ್ಲಿ ಸಿಗುತ್ತಿಲ್ಲ. ರೈತರು ಕೆಲಸ ಬಿಟ್ಟು ಗೊಬ್ಬರಕ್ಕಾಗಿ ಅಲೆಯುವಂತಾಗಿದೆ. ಹಣ ಹಿಡಿದುಕೊಂಡು ಖಾಸಗಿ ವ್ಯಾಪಾರಸ್ಥರ ಬಳಿ ಹೋದರೂ ಗೊಬ್ಬರ ಇಲ್ಲ ಎಂಬ ಉತ್ತರ ಬರುತ್ತಿದೆ.
ಬಿತ್ತನೆಗೆ ತೊಂದರೆ: 16.16.32, 17.17.17 ಗೊಬ್ಬರ ಸದ್ಯ ಸಿಗುತ್ತಿದೆ. ಆದರೆ ಈ ಗೊಬ್ಬರದಲ್ಲಿ ಯೂರಿಯಾ ಮತ್ತು ಪೋಟಸ್ ಗೊಬ್ಬರ ಮಿಶ್ರಣ ಇರುವುದರಿಂದ ಬಿತ್ತುವ ಕೂರಿಗೆಯಲ್ಲಿ ಸರಿಯಾಗಿ ಇಳಿಯುವುದಿಲ್ಲ. ಹೀಗಾಗಿ ಈ ಗೊಬ್ಬರ ಖರೀದಿಗೆ ರೈತರು ಮುಂದಾಗುತ್ತಿಲ್ಲ.ಹೆಚ್ಚಿಗೆ ಹಣ ನೀಡಿ ಗೊಬ್ಬರ ಖರೀದಿ: ತಾಲೂಕಿನಲ್ಲಿ ಡಿಎಪಿ, 10.26.26, 20.20.20 ಗೊಬ್ಬರ ಸಿಗದ ಹಿನ್ನೆಲೆಯಲ್ಲಿ ರೈತರು ಪಕ್ಕದ ತಾಲೂಕುಗಳಿಗೆ ಹೋಗುತ್ತಿದ್ದಾರೆ. ಬದಾಮಿ, ರಾಮದುರ್ಗ, ನವಲಗುಂದದಿಂದ ತರಬೇಕಾದ ಸ್ಥಿತಿ ಇಲ್ಲಿಯ ರೈತರಿಗೆ ಈ ವರ್ಷ ಬಂದಿದೆ.
ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ಸದ್ಯ ರೈತ ಹಿಂಗಾರು ಹಂಗಾಮಿನ ವಾಣಿಜ್ಯ ಬೆಳೆಗಳಾದ ಕಡಲೆ, ಗೋದಿ, ಜೋಳ, ಬಿತ್ತನೆ ಮಾಡುವ ಸಮಯಕ್ಕೆ ತಾಲೂಕಿನಲ್ಲಿ ಬಿತ್ತನೆಗೆ ಬೇಕಾಗಿರುವ ಗೊಬ್ಬರ ಸಿಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೃಷಿ ಇಲಾಖೆ ಅಧಿಕಾರಿಗಳು ಎರಡು ದಿನಗಳಲ್ಲಿ ರೈತನಿಗೆ ಬೇಕಾದ ಗೋಬ್ಬರ ತರಿಸಿಕೊಡಬೇಕೆಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಆಗ್ರಹಿಸಿದ್ದಾರೆ.ಈಗಾಗಲೇ ತಾಲೂಕಿನ ಎಲ್ಲ ವ್ಯಾಪಾರಸ್ಥರ ಸಭೆ ಕರೆದು, ಹಿಂಗಾರು ಬಿತ್ತನೆಗೆ ಗೊಬ್ಬರವನ್ನು ಬೇಗ ತರಿಸಿ ಕೊಡಬೇಕೆಂದು ಖಾಸಗಿ ಗೊಬ್ಬರ ಅಂಗಡಿ ಮಾಲೀಕರಿಗೆ ತಿಳಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ಅಧಿಕಾರಿ ಮಂಜುನಾಥ ಜನಮಟ್ಟಿ ತಿಳಿಸಿದ್ದಾರೆ.