ಅವೈಜ್ಞಾನಿಕ ಆನೆ ಬಿಡಾರಕ್ಕೆ ರೈತ ಹಿತರಕ್ಷಣಾ ಸಮಿತಿ ವಿರೋಧ

| Published : Oct 27 2024, 02:43 AM IST

ಸಾರಾಂಶ

ಬಾಳೆಹೊನ್ನೂರು, ಅರಣ್ಯ ಇಲಾಖೆ ವ್ಯಾಪ್ತಿಯ ಹಲಸೂರು ಸಾಮಾಜಿಕ ಅರಣ್ಯದ ತನೂಡಿಯಲ್ಲಿ ಮಾಡಲು ಉದ್ದೇಶಿಸಿರುವ ಆನೆ ಬಿಡಾರಕ್ಕೆ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವಿರೋಧವಿದೆ ಎಂದು ಸಮಿತಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದ್ದಾರೆ.

ಅರಣ್ಯ ಸಚಿವರು ಹಾಗು ಇಲಾಖೆಯ ಹೇಳಿಕೆಯಲ್ಲಿ ಗೊಂದಲಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಅರಣ್ಯ ಇಲಾಖೆ ವ್ಯಾಪ್ತಿಯ ಹಲಸೂರು ಸಾಮಾಜಿಕ ಅರಣ್ಯದ ತನೂಡಿಯಲ್ಲಿ ಮಾಡಲು ಉದ್ದೇಶಿಸಿರುವ ಆನೆ ಬಿಡಾರಕ್ಕೆ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವಿರೋಧವಿದೆ ಎಂದು ಸಮಿತಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದ್ದಾರೆ.ಶಿಬಿರ ವಿಚಾರದಲ್ಲಿ ಅರಣ್ಯ ಸಚಿವರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆಗಳ ನಡುವೆ ವೈರುಧ್ಯವಿದೆ. ಈ ವೈರುಧ್ಯ ಸ್ಪಷ್ಟಪಡಿಸದೆ ಸ್ಥಳೀಯ ಗ್ರಾಪಂ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸದೆ ಆನೆ ಶಿಬಿರ ಯೋಜನೆ ಸಮಂಜಸವಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಚಿವ ಈಶ್ವರ ಖಂಡ್ರೆ ಭದ್ರಾ ಅಭಯಾರಣ್ಯದಲ್ಲಿ ೨೦೦೦ ಹೆಕ್ಟೇರ್ ಭೂಮಿ ಗುರುತಿಸಿದ್ದು ಅದರಲ್ಲಿ ಆನೆ ವಿಹಾರ ಧಾಮ ನಿರ್ಮಾಣ ಮಾಡಿ ಅಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣ ಆಗಿರುವ ಆನೆಗಳ ಹಿಡಿದು ಅಭಯಾರಣ್ಯದಲ್ಲಿ ಹಲಸು, ಬಿದಿರು, ಹುಲ್ಲು ಬೆಳೆಸಿ, ಆಹಾರ ಒದಗಿಸಿ ಜೊತೆಗೆ ಸುತ್ತಲೂ ಬೇಲಿ ನಿರ್ಮಾಣ ಮಾಡಿ ಪುನರ್ವಸತಿ ಮಾಡಲಾಗುವುದು ಎಂದಿದ್ದರು. ಆದರೆ ಅರಣ್ಯ ಇಲಾಖೆ ಬಾಳೆಹೊನ್ನೂರು ಸಮೀಪ ಹಲಸೂರು ಅರಣ್ಯ ಭಾಗದಲ್ಲಿ ಆನೆ ಶಿಬಿರ ಮಾಡಲಾಗುತ್ತದೆ. ಇತರ ಭಾಗದಲ್ಲಿ ಉಪಟಳ ಕೊಡುವ ಕಾಡಾನೆಗಳ ಹಿಡಿಯಲು ಇಲ್ಲಿ ಆನೆಗಳನ್ನು ಸಾಕಿ ಪಳಗಿಸುವ ಯೋಜನೆ ಮಾಡಲಾಗಿದೆ ಎಂದು ಹೇಳಿದೆ. ಈ ಎರಡು ವಿಭಿನ್ನ ಹೇಳಿಕೆ ನಿವಾಸಿಗಳ ಚಿಂತೆಗೆ ಕಾರಣವಾಗಿದೆ.

ಮುಖ್ಯವಾಗಿ ಆನೆ ಶಿಬಿರ ಮಾಡಲು ಆಯ್ಕೆ ಮಾಡಿಕೊಂಡ ಜಾಗ. ಮುಂದೆ ವಿಸ್ತರಣೆ ಮಾಡಿದರೆ ಇಲ್ಲಿ ವಾಸ ಮಾಡುವ ನಿವಾಸಿಗರ ಪಾಡು ಏನು? ಈ ಹಿಂದೆ ಹುಲಿ ಯೋಜನೆ ಜಾರಿಗೆ ಬಂದಾಗ ಜಾಗರ ವ್ಯಾಲಿಯಲ್ಲಿ ಮಾತ್ರ ಮಾಡುತ್ತೇವೆ ಎಂದು ಆನಂತರ ಕ್ರಮೇಣ ವಿಸ್ತರಣೆ ಮಾಡಿ, ಬಫರ್ ಝೋನ್ ಹೆಸರಲಿ ಮತ್ತಷ್ಟು ವಿಸ್ತರಣೆ ಮಾಡಿದೆ. ಮುಂದೆ ಆನೆ ಶಿಬಿರದ ಹೆಸರಿನಲ್ಲಿ ಇಲ್ಲಿನ ಜನರ ಬದುಕನ್ನು ಕಸಿದುಕೊಳ್ಳುವುದಿಲ್ಲ ಎನ್ನುವ ಭರವಸೆ ಜನರಲ್ಲಿ ಉಳಿದಿಲ್ಲ.

ಆನೆ ಶಿಬಿರ ಮಾಡುವುದು ಹೇಗೆ ಎಂದು ಸ್ಥಳೀಯ ಜನರಿಗೆ ಸ್ಪಷ್ಟ ಪಡಿಸಬೇಕು. ಹಾಗೆಯೇ ಈ ಯೋಜನೆಯಲ್ಲಿ ಸೃಷ್ಟಿ ಆಗುವ ಉದ್ಯೋಗ ಅವಕಾಶ ಗಳನ್ನು ಸ್ಥಳೀಯರಿಗೆ ಮೀಸಲು ಇಡಬೇಕು. ಪ್ರವಾಸೋದ್ಯಮ ಬೆಳವಣಿಗೆಗೆ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಮಿತಿ ಒತ್ತಾಯ ಮಾಡುತ್ತದೆ.

ಸ್ಥಳೀಯ ಜನರೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ರೂಪುರೇಷೆ ಮಾಡಿ ಪ್ರವಾಸೋದ್ಯಮ ನೀತಿ ಜಾರಿಗೆ ಸಮಿತಿ ವಿರೋಧವಿಲ್ಲ. ಸ್ಥಳೀಯವಾಗಿ ಚರ್ಚಿಸದೆ ವ್ಯಾಪ್ತಿಯ ಕುರಿತು ಲಿಖಿತ ಭರವಸೆ ನೀಡದೆ ಜಾರಿ ಮಾಡಲು ಹೊರಟರೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಉಗ್ರ ಜನಾಂದೋಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈಗಾಗಲೇ ಮಲೆನಾಡು ಅನೇಕ ಅರಣ್ಯ ಕಾನೂನು ಹಾಗೂ ಯೋಜನೆಗಳ ಮೂಲಕ ತತ್ತರಿಸಿ ಹೋಗಿದೆ. ಬೆಳೆದ ಬತ್ತ, ಅಡಕೆ, ಕಾಫಿ, ಕಾಳು ಮೆಣಸು ಫಸಲು ಕೊಯ್ಲು ಬರುವ ಸಂದರ್ಭದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಗೆ ನೆಲಕಚ್ಚಿದೆ. ದ್ದಾರೆ. ಇದಲ್ಲದೆ ಒತ್ತುವರಿ ತೆರವು, ಸೆಕ್ಷನ್ 4, ಸೆಕ್ಷನ್ 17, ಕಸ್ತೂರಿ ರಂಗನ್ ವರದಿ ಗುಮ್ಮ ನಾಗರಿಕರನ್ನು ಬೆದರಿಸಿವೆ.ಸಮಿತಿ ಕಾರ್ಯದರ್ಶಿ ರಂಜಿತ್, ಮಲೆನಾಡು ನಾಗರೀಕ ರೈತ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಎಸ್.ವಿ.ಶಂಕರ್, ಪದಾಧಿಕಾರಿ ರತ್ನಾಕರ್ ಗಡಿಗೇಶ್ವರ, ಚಂದ್ರಶೇಖರ್ ರೈ, ಬೆಳಸೆ ರತ್ನಾಕರ್, ನವೀನ್ ಕರಗಣೆ, ಕಾರ್ತಿಕ್ ಕರ‍್ಗದ್ದೆ ಮತ್ತಿತರರು ಹಾಜರಿದ್ದರು.

-- ಕೋಟ್ --೧ಈ ಹಿಂದಿನ ಬಿಜೆಪಿ ಸರ್ಕಾರ ಕಾಫಿ ಒತ್ತುವರಿ ಭೂಮಿಯನ್ನು ಲೀಸ್‌ಗೆ ನೀಡುವ ನಿರ್ಧಾರ ಮಾಡಿತ್ತು. ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಅದಕ್ಕೆ ಪೂರಕ ಹೇಳಿಕೆ ನೀಡಿತ್ತು. ಹೆಚ್ಚಿನ ರೈತರು ಅರಣ್ಯ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡಿದ್ದಾರೆ. ಜನಪ್ರತಿನಿಧಿಗಳು ಮೌಖಿಕವಾಗಿ ಹೇಳಿಕೆ ನೀಡಿದಾಗ ರೈತರಿಗೆ ಆಶಾಭಾವನೆ ಮೂಡುತ್ತದೆ. ಅಧಿಕಾರಿಗಳು ರೈತರ ಹೋರಾಟದ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿ ದ್ದಾರೆ. ಸಚಿವ ಈಶ್ವರ್ ಖಂಡ್ರೆ ಅವರಿಗೆ ಅರಣ್ಯ ಎಂದರೆ ಏನೆಂದೇ ತಿಳಿದಿಲ್ಲ. ಇದು ಸರ್ಕಾರದ ದೊಡ್ಡ ನ್ಯೂನ್ಯತೆಯಾಗಿದೆ.-ಎಸ್.ವಿ.ಶಂಕರ್,

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ

೨೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನಲ್ಲಿ ನಡೆದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಸಭೆಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿದರು. ಎಸ್.ವಿ.ಶಂಕರ್, ರಂಜಿತ್ ಶೃಂಗೇರಿ, ರತ್ನಾಕರ್, ಚಂದ್ರಶೇಖರ್ ರೈ ಇದ್ದರು.