ನಿರೀಕ್ಷಿತ ಪ್ರಮಾಣದಲ್ಲಿ ಖರೀದಿದಾರರು ಬಾರದೇ ಬಾಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.
ವಿ.ಎಂ. ನಾಗಭೂಷಣ
ಸಂಡೂರು: ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಬಾಳೆ ಬೆಳೆಗಾರರು ಒಂದೆಡೆ ದರ ಕುಸಿತ, ಮತ್ತೊಂದೆಡೆ ನಿರೀಕ್ಷಿತ ಪ್ರಮಾಣದಲ್ಲಿ ಖರೀದಿದಾರರು ಬಾರದೇ ಬಾಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.ತಾಲೂಕಿನ ಸಂಡೂರು, ಭುಜಂಗನಗರ, ದೌಲತ್‌ಪುರ, ಕೃಷ್ಣಾನಗರ, ಅಂಕಮನಾಳ್, ಜಿ.ಎಲ್.ಹಳ್ಳಿ, ಮೋತಲಕುಂಟ, ಕಾಳಿಂಗೇರಿ ಮುಂತಾದ ಗ್ರಾಮಗಳಲ್ಲಿ ಬಾಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಶೇ.೯೦ರಷ್ಟು ಜಿ ೯ ತಳಿಯ ಬಾಳೆ ಬೆಳೆಯುತ್ತಾರೆ.ಖರೀದಿದಾರರು ಬರುತ್ತಿಲ್ಲ:
ದೌಲತ್‌ಪುರದ ರೈತ ಮುಖಂಡ ವಿ.ಜೆ. ಶ್ರೀಪಾದಸ್ವಾಮಿ ಕನ್ನಡಪ್ರಭದೊಂದಿಗೆ ಮಾತನಾಡಿ, ನಾನು ಒಂದು ಎಕರೆ ಪ್ರದೇಶದಲ್ಲಿ ಅಡಿಕೆಯೊಂದಿಗೆ ಬಾಳೆ ಬೆಳೆದಿದ್ದೇನೆ. ಬಾಳೆ ಕೃಷಿಗೆ ಒಂದು ಎಕರೆಗೆ ₹೬೦-೭೦ ಸಾವಿರ ಖರ್ಚು ಬರುತ್ತದೆ. ಈಗ ಉತ್ತಮ ಇಳುವರಿ ಬಂದಿದೆ. ಲಾಭದ ನಿರೀಕ್ಷೆಯಲ್ಲಿದ್ದೆವು. ಅದರೆ, ಬಾಳೆ ದರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬಾಳೆ ಬೆಳೆಯನ್ನು ಖರೀದಿಸಲು ಖರೀದಿದಾರರು ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಡಜನ್ ಬಾಳೆ ಹಣ್ಣು ₹೫೦ರಿಂದ ೬೦ರಂತೆ ಮಾರಾಟವಾಗುತ್ತಿದೆ. ದರ ಕುಸಿತದಿಂದ ಕಂಗಾಲಾಗಿರುವ ನಾವು ನಾವು ಕೆಜಿ ಬಾಳೆಯನ್ನು ₹೪-೫ ರಂತೆ ಕೊಡುತ್ತೇವೆ ಎಂದರೂ ಬಾಳೆಯನ್ನು ಖರೀದಿಸಲು ಖರೀದಿದಾರರು ಬರುತ್ತಿಲ್ಲ. ಕಾರಣ ತಿಳಿಯುತ್ತಿಲ್ಲ. ಕೆಜಿ ಬಾಳೆಗೆ ₹೧೦-೧೫ ದೊರೆತರೆ ರೈತರು ಲಾಭವನ್ನು ಕಾಣಬಹುದು. ಈಗಿರುವ ದರಕ್ಕೆ ಮಾರಾಟ ಮಾಡಿದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.ಆಂಧ್ರದಿಂದ ಬರುವ ಬಾಳೆ:
ಕೆಲ ತಿಂಗಳ ಹಿಂದೆ ತಾಲೂಕಿನಲ್ಲಿ ಕೆಜಿ ಬಾಳೆಯನ್ನು ತೋಟಗಳಲ್ಲಿ ₹೮-೧೦ ರಂತೆ ಖರೀದಿಸುತ್ತಿದ್ದರು. ಈಗ ₹೪-೬ಕ್ಕೆ ಇಳಿದಿದೆ. ಮೊದಲ ಬೆಳೆಯನ್ನು ಹೆಚ್ಚಿನ ದರಕ್ಕೆ ಖರೀಸುತ್ತಾರೆ. ಎರಡು ಹಾಗೂ ಮೂರನೇ ಬೆಳೆಯನ್ನು ಕಡಿಮೆ ಬೆಲೆಗೆ ಕೇಳುತ್ತಾರೆ. ಆಂಧ್ರಪ್ರದೇಶದಿಂದಲೂ ಬಾಳೆ ಪೂರೈಕೆಯಾಗುತ್ತಿದೆ. ಹೆಚ್ಚಿನ ಮಳೆಯಾಗಿ ಇಳುವರಿ ಸ್ವಲ್ಪ ಕಡಿಮೆಯಾಗಿದೆ. ದರ ಕುಸಿತದಿಂದ ಬಾಳೆ ಬೆಳೆಗಾರರು ನಷ್ಟವನ್ನು ಅನುಭವಿಸುವಂತಾಗಿದೆ ಎನ್ನುತ್ತಾರೆ ಲಕ್ಷ್ಮೀಪುರದ ಬಾಳೆ ಬೆಳೆಗಾರ ಸಿದ್ರಾಮಪ್ಪ.ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹನುಮಪ್ಪ ನಾಯಕ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ೬೦೦-೭೦೦ ಹೆಕ್ಟೇರ್ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯಲಾಗುತ್ತದೆ. ನರೇಗಾ ಯೋಜನೆ ಮತ್ತು ಹನಿ ನೀರಾವರಿಗೆ ಸಬ್ಸಿಡಿ ನೀಡುತ್ತಿದ್ದುದರಿಂದ ವರ್ಷದಿಂದ ವರ್ಷಕ್ಕೆ ಬಾಳೆ ಕೃಷಿಯ ಪ್ರದೇಶ ಹೆಚ್ಚಾಗಿದೆ. ಈ ಹಿಂದೆ ಚಿತ್ರದುರ್ಗ, ಬೆಂಗಳೂರು, ಹೊಸಪೇಟೆ ಮುಂತಾದೆಡೆಯಿಂದ ಕೆಲವೊಮ್ಮೆ ಬೇರೆ ರಾಜ್ಯಗಳಿಂದಲೂ ಬಾಳೆ ಖರೀದಿಗೆ ಖರೀದಿದಾರರು ಬರುತ್ತಿದ್ದರು. ಈ ಬಾರಿ ಖರೀದಿದಾರರು ಬರುವುದು ಸ್ವಲ್ಪ ಕಡಿಮೆಯಾಗಿದೆ. ಪೂರೈಕೆ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದರು.
ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕು, ಅವರು ಲಾಭ ಗಳಿಸುವಂತಾಗಬೇಕು. ಇದಕ್ಕೆ ಪೂರಕವಾಗಿ ಮಾರುಕಟ್ಟೆ ವ್ಯವಸ್ಥೆ ರೂಪಗೊಳ್ಳಬೇಕಿದೆ.