ಬ್ಯಾಡಗಿ: ತಾಲೂಕಿನ ಬಹುತೇಕ ರೈತರು ರೇಷ್ಮೆ ಬೆಳೆಯತ್ತ ಒಲವು ತೋರಿದ್ದು ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದಾರೆ. ಇಲಾಖೆ ಕೂಡ ಪ್ರೋತ್ಸಾಹ ಧನ ವಿತರಿಸುವ ಮೂಲಕ ರೈತರ ನೆರವು ನೀಡುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೇಷ್ಮೆ ಇಲಾಖೆ 2025ನೇ ಸಾಲಿನ ಕೇಂದ್ರ ಪುರಸ್ಕೃತ ಸಿಲ್ಕ ಸಮಗ್ರ-2 ಹಾಗೂ ಗಿರಿಜನ, ಸಾಮಾನ್ಯ, ವಿಶೇಷ ಯೋಜನೆಯಲ್ಲಿ ರೇಷ್ಮೆ ಬೆಳೆಗಾರರಿಗೆ ಹುಳು ಸಾಕಾಣಿಕೆ ಸಲಕರಣೆ ಹಾಗೂ ಇತರೆ ಸಾಮಗ್ರಿ ವಿತರಿಸಿ ಮಾತನಾಡಿದರು.ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸುವ ಮೂಲಕ ಸಂಕಷ್ಟದಲ್ಲಿ ಸಿಲುಕಿದ ಪರಿಣಾಮ ಬಹುತೇಕ ರೈತರು ಅಡಕೆ ಸೇರಿದಂತೆ ತೋಟಗಾರಿಕೆ ಬೆಳೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಕಡಿಮೆ, ಭೂಮಿ, ನೀರು ಬಳಸಿಕೊಂಡು ಅಧಿಕ ಲಾಭದ ಬೆಳೆಯಾಗಿದೆ. ತಾಲೂಕಿನ ಕಲ್ಲೆದೇವರು, ಅಳಲಗೇರಿ, ಕದರಮಂಡಲಗಿ, ಚಿಕ್ಕಣಜಿ, ಹೆಡಿಗ್ಗೊಂಡ ಸೇರಿದಂತೆ ಬಹುತೇಕ ಗ್ರಾಮಗಳ 500 ರೈತರು 445 ಹೆಚ್ಚು ಹೆಕ್ಟೇರು ಭೂಮಿಯಲ್ಲಿ ರೇಷ್ಮೆ ಬೆಳೆಯುತ್ತಿದ್ದಾರೆ. ಸರ್ಕಾರ ಹೂಲಿಹಳ್ಳಿ ಬಳಿ ಮೆಗಾ ಮಾರುಕಟ್ಟೆ ನಿರ್ಮಿಸುವ ಮೂಲಕ ರೇಷ್ಮೆ ಬೆಳೆಗಾರರಿಗೆ ಗೂಡು ಮಾರಾಟಕ್ಕೆ ಅನುಕೂಲ ಮಾಡಿದೆ, ಇನ್ಮುಂದೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆಗೂಡು ಉತ್ಪಾದನೆ ಅವಕಾಶ ಸಿಗಲಿದೆ ಎಂದರು.
ರೇಷ್ಮೆ ವಿಸ್ತರ್ಣಾಧಿಕಾರಿ ಭಾರತಿ ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ದ್ವಿಗುಣವಾಗಿದೆ. ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹಿಸಲು ಇಲಾಖೆಯಿಂದ ಪ್ರೋತ್ಸಾಹಧನ, ಹುಳು ಸಾಕಾಣಿಕೆ ಸಲಕರಣೆ ಸೇರಿದಂತೆ ಇತರೆ ಸಾಮಗ್ರಿ, ಔಷಧಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ ಸುಮಾರು 180 ಹೆಕ್ಟೇರು ಪ್ರದೇಶದಲ್ಲಿ 125 ರೈತಕುಟುಂಬಗಳು ರೇಷ್ಮೆಯನ್ನು 15 ವರ್ಷಗಳಿಂದ ಬೆಳೆಯುತ್ತಿದ್ದಾರೆ. ಪರಿಣಾಮ ರೈತರು ಆರ್ಥಿಕವಾಗಿ ಅಭಿವೃದ್ದಿಗೊಂಡಿದ್ದು, ಕೂಲಿ ಕಾರ್ಮಿಕರಿಗೂ ಉದ್ಯೋಗ ದೊರಕಿದೆ. ರೈತರು ಹೈನು ಸಾಕಾಣಿಕೆ, ಕುರಿ ಸಾಕಾಣಿಕೆ ಮೂಲಕ ಆದಾಯ ದ್ವಿಗುಣಗೊಳಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ರೈತರನ್ನು ಹೊಂದಿದ ಗ್ರಾಮವಾಗಿದ್ದು, ರೈತರು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡಿದ್ದಾರೆ. ಬೆಳೆಗಾರರಿಗೆ ಇಲಾಖೆಯಿಂದ ರೇಷ್ಮೆ ಬೆಳೆಗಾರರ ತರಬೇತಿ ನಡೆಸಲಾಗುತ್ತಿದೆ.ರೈತರಿಗೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಡ್ಡಿ ನಾಟಿಗೆ ಎಕರೆಗೆ 40 ಸಾವಿರ ರು. ಸಹಾಯಧನ, ರೇಷ್ಮೆ ಮನೆ ನಿರ್ಮಿಸಿಕೊಳ್ಳಲು 3.37 ಲಕ್ಷ ರು. ಸಹಾಯಧನ, ತಾತ್ಕಾಲಿಕ ಶೆಡ್ ನಿರ್ಮಾಣ, 1 ಲ.ರು. ರೇಷ್ಮೆ ಹುಳು ಸಾಕಾಣಿಕೆ ಸಲಕರಣೆಗಳೆ ಶೇ. 75ರಷ್ಟು ಸಹಾಯಧನ, ಗೂಡು ಸಾಕಾಣಿಕೆ, ಚಾಕಿವೆಚ್ಚ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈತರಿಗೆ ಕೇಂದ್ರ ಶೇ.50, ರಾಜ್ಯ ಶೇ.25 ಸಲಕರಣೆಗಳಿಗೆ ಪ್ರೋತ್ಸಾಹಧ ನೀಡಲಿದ್ದು, ಉಳಿದ ಮೊತ್ತ ರೈತರು ಭರಿಸಬೇಕಿದೆ ಎಂದರು.ಈ ವೇಳೆ ರೇಷ್ಮೆ ಸಹಾಯಕ ನಿರ್ದೇಶಕ ಬಿ.ಆರ್. ಅಂಗಡಿ, ರೇಷ್ಮೆ ವಿಸ್ತರ್ಣಾಧಿಕಾರಿ ಭಾರತಿ ನಾಯ್ಕ, ರೇಷ್ಮೆ ಬೆಳೆಗಾರರಾದ ಶಿವರಾಜ ಹಿರೇಮಠ, ಹನುಮಂತಪ್ಪ ಅಮಿನ, ಪಕ್ಕೀರೇಶ ಮರಬಸಣ್ಣನವರ, ಕಲ್ಲಪ್ಪ ಬೆನಕನಕೊಂಡ, ಅನುಸೂಯಾ ಮಡಿವಾಳರ, ಸಂತೋಷ ಲಮಾಣಿ, ಮಲ್ಲಿಕಾರ್ಜುನ ಲಮಾಣಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ಮುನ್ನಾಫ್‌ಸಾಬ ಎರೆಸೀಮೆ, ಸದಸ್ಯರಾದ ಗಿರೀಶಸ್ವಾಮಿ ಇಂಡಿಮಠ, ದುರ್ಗೆಶ ಗೋಣೆಮ್ಮನವರ, ಮಜೀದ್ ಮುಲ್ಲಾ ಇತರರಿದ್ದರು.