ಬೈಲಹೊಂಗಲ: ಗಿಡಗಂಟೆಗಳು ಬೆಳೆದು ಹಲವು ವರ್ಷಗಳಿಂದ ತೀರ ಹದಗೆಟ್ಟಿದ್ದ ದೊಡವಾಡ–ಕರೀಕಟ್ಟಿ ದಾರಿ ಬಳಿಯ ಕರನಿಂಗವ್ವನ ಗುಡಿ ಹೊಲದ ರಸ್ತೆಯನ್ನು ತಾಲೂಕಿನ ದೊಡವಾಡ ಸ್ಥಳೀಯ ರೈತರೇ ಸ್ವತಃ ವಂತಿಗೆ ಸಂಗ್ರಹಿಸಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಸುಮಾರು 1800 ಎಕರೆಗೂ ಹೆಚ್ಚು ಕೃಷಿ ಭೂಮಿ ಈ ರಸ್ತೆ ಭಾಗಕ್ಕೆ ಒಳಪಡುತ್ತದೆ. ನೂರಾರು ರೈತರು ತಮ್ಮ ಹೊಲಗಳಿಗೆ ತೆರಳಲು ಇದೇ ರಸ್ತೆ ಪ್ರಮುಖ ಆಧಾರ. ಆದರೆ, ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಜಾಗವಿಲ್ಲದೆ, ನೀರು ರಸ್ತೆಯ ಮೇಲೆ ನಿಂತು ಸಂಪೂರ್ಣ ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಮೀನುಗಳಿಗೆ ತೆರಳು ರೈತರು ತೊಂದರೆ ಅನುಭವಿಸುತ್ತಿದ್ದರು.

ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿಗೆ ಹಲವು ಬಾರಿ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೂ ಯಾರು ಕ್ಯಾರೇ ಎಂದಿರಲಿಲ್ಲ. ಇದರಿಂದ ಬೇಸತ್ತ ರೈತರು ಮುಂಗಾರು ಹಂಗಾಮಿಗೆ ಮುನ್ನ ಹಣ ಸಂಗ್ರಹಿಸಿ ಜೆಸಿಬಿ ಬಳಸಿ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದಾರೆ.

ರಾಯಪ್ಪ ಪಟಾತ, ಬಸವರಾಜ ಹೊಂಗಲ, ಸಂತೋಷ ಚೌಡಣ್ಣವರ, ರಾಜು ಕೆಂಚರಾಮನಹಾಳ, ಮಂಜುನಾಥ ಕರಿಸಿರಿ, ಸಿದ್ದು ಯರಿಕಿತ್ತೂರ, ಪುಂಡಲೀಕಪ್ಪ ಬೆಡಸೂರು, ಮಹದೇವ ಕೆಂಚರಾಮನಹಾಳ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.

ರಸ್ತೆಯ ದುರವಸ್ಥೆಯಿಂದ ಕೃಷಿ ಕಾರ್ಯಗಳಿಗೆ ತೆರಳಲು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣ ಗಮನ ಹರಿಸಿ ಶಾಶ್ವತ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.