ಸಾರಾಂಶ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಎರೇ ಬೂದಿಹಾಳು ಸಮೀಪದ ಶ್ರೀನಿವಾಸ ನಗರದದಲ್ಲಿ ಐಕಾಂತಿಕ ಬುಡಕಟ್ಟು ಸಮುದಾಯದ ಆಶ್ರಯದಲ್ಲಿ ಸಹಜ ಕೃಷಿ ಮತ್ತು ಸಹಜ ಬದುಕು ಕುರಿತ ಹಸಿರು ಉತ್ಸವವು ಸಾವಿರಾರು ಸಾವಯವ ಕೃಷಿಕರ ಆಸಕ್ತರ ಸಮ್ಮುಖದಲ್ಲಿ ಭಾನುವಾರ ಜರುಗಿತು.ರಾಣೇಬೆನ್ನೂರು ತಾಲೂಕು ಮುದೇನೂರು ಗ್ರಾಮದ ಬೀಜಮಾತೆ ಸುನೀತಾ ಶಂಕ್ರಗೌಡ ವಿವಿಧ ತರಕಾರಿ ತಳಿಗಳು, ದ್ವಿದಳ ಧಾನ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಎರೆಹಳ್ಳಿ ಗ್ರಾಮದ ಪರಿಮಳ ಹನುಮಂತಪ್ಪ ಸಿರಿಧಾನ್ಯಗಳು, ಬೀಜ ವಿನಿಮಯ ಪದ್ಧತಿ ಬಗ್ಗೆ ತಿಳಿಸಿದರು. ಬೆಂಗಳೂರಿನ ಶೈಲಜಾ ತಾರಸಿ ತೋಟಗಳ ಉಪಯೋಗ ತಿಳಿಸಿದರು.
ಐಕಾಂತಿಕ ಸಂಸ್ಥೆಯ ರಾಘವ ನೂರಾರು ಕೃಷಿಕರ ಜತೆ 1 ಗಂಟೆಗಳ ನಿಸರ್ಗ ನಡಿಗೆ ನಡೆಸಿ, ತೋಟಗಳಲ್ಲಿರುವ ವಿವಿಧ ಸಾವಯವ ಸಸಿಗಳ, ಮರಗಳ ಬಗ್ಗೆ ಮಾಹಿತಿ ಮತ್ತು ಸಂವಾದ ನಡೆಸಿದರು. ಬೀಜ ಮತ್ತು ಗಿಡಗಳ ವಿನಿಮಯ ಪದ್ಧತಿ ಹಂಚಿಕೊಂಡರು.ಕೃಷಿಕರಾದ ಅವಿನಾಶ್, ಸುಜಿತ್, ಪಾಂಡರಂಗಾಚಾರ್, ವೀರೇಶ್, ಶಶಿಕಲಾ, ಕುಂಬಳೂರು ಶಂಭು ಸಂಸ್ಕರಿಸಿದ ಸಕ್ಕರೆ, ಹಾಲು ಹಣ್ಣುಗಳ ಪ್ರಾತ್ಯಕ್ಷಿಕೆ ನಡೆಸಿದರು. ಸಸಿಗಳು, ಹಣ್ಣುಗಳು, ಕುಂಬಾರಿಕೆ ಮಣ್ಣಿನ ಮಡಕೆ, ದೇಶಿ ಸೊಗಡಿನ ಆಹಾರದ ಬಗ್ಗೆ ಪ್ರಕೃತಿ ಕುಟೀರದಲ್ಲಿ ಉಪನ್ಯಾಸ ನಡೆಯಿತು. ಅನಂತರ ಸಂವಾದವೂ ಇತ್ತು.
ಹಸಿರಿನ ಮಧ್ಯೆ ಸ್ವಯಂ ತಯಾರಿಕೆಯ ಆಹಾರ ಸವಿದರೆ, ಕೆಲವು ಕೃಷಿಕರು ಗಾಣದ ಎಣ್ಣೆ, ಹಣ್ಣುಗಳು, ಉಪ್ಪಿನಕಾಯಿ, ದೇಸಿ ಬಟ್ಟೆಗಳು, ಧಾನ್ಯಗಳು, ನೀರಾ, ಆರೋಗ್ಯ ಪೇಯಗಳ ಮಾರಾಟ ಮಾಡಿದರು. ಶೃತಿ ಸಂದೀಪ್ ಸುಣ್ಣ, ಮಣ್ಣಿನಿಂದ ನಿರ್ಮಾಣವಾಗುವ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ತಿಳಿಸಿದರು.ಕೃಷಿ ಪರಿಕರಗಳು ಮತ್ತು ಪೇಟ್‌ಗಳ ಮಾರಾಟವೂ ಆಯಿತು. ಉತ್ಸವಕ್ಕೆ ಬೆಂಗಳೂರು, ದೆಹಲಿ, ಹರಿಯಾಣ, ಧಾರವಾಡ, ಹುಬ್ಬಳ್ಳಿ, ಜಮಖಂಡಿ, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಚಿತ್ರದುರ್ಗ, ಹಾವೇರಿ ಭಾಗಗಳಿಂದ ನೂರಾರು ಸಾವಯವ ಕೃಷಿಕರು ಆಗಮಿಸಿದ್ದರು.
- - - -೨ಎಂಬಿಆರ್೧: ದೇಶಿ ಬಟ್ಟೆ ಮಾರಾಟ ನಡೆಯಿತು.-೨ಎಂಬಿಆರ್೨: ನಿಸರ್ಗ ನಡಿಗೆಯಲ್ಲಿ ರಾಘವ ಕೃಷಿಕರು, ಸಾರ್ವಜನಿಕರಿಗೆ ಮಾಹಿತಿ ನೀಡಿದರು.