ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರೈತರು ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚು ಹೆಚ್ಚು ರಫ್ತು ಮಾಡಿದಾಗ ರೈತರಿಗೆ ಹಾಗೂ ದೇಶಕ್ಕೆ ಆದಾಯ ಬಲಿದೆ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್‌) ಅಧ್ಯಕ್ಷ ಬಿ.ಎಚ್‌.ಹರೀಶ್‌ ಹೇಳಿದರು.

ಕೆಪೆಕ್‌, ಚಿಕ್ಕಮಗಳೂರು ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿರುವ ‘ಕಾಳುಮೆಣಸು ಹಾಗೂ ಸಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು’ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಕಾರ್ಯಾಗಾರದಲ್ಲಿ ಹೆಚ್ಚಿನ ಮಾಹಿತಿ ಪಡೆಯಬೇಕು ಎಂದರು.

ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಮಾತನಾಡಿದರು. ಅಡಕೆ, ತೆಂಗು, ಕಾಫಿ ತ್ತಿತರೆ ತಾಕುಗಳಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸಿನ ಮಹತ್ವದ ಬಗ್ಗೆ ಭಾರತೀಯ ಸಂಬಾರು ಬೆಳೆಗಳ ಅನುಸಂಧಾನ ಸಂಸ್ಥೆಯ ಪ್ರಧಾನ ವಿಜ್ಞಾನಿ (ನಿವೃತ್ತ) ಡಾ.ಎಂ.ಎನ್.ಆರ್.ವೇಣುಗೋಪಾಲ್, ಸಂಬಾರು ಬೆಳೆಗಳಾದ ಜಾಯಿಕಾಯಿ, ಏಲಕ್ಕಿ, ಲವಂಗ, ವೆನಿಲ್ಲಾ, ಕೋಕಮ್ ಬೆಳೆಗಳ ಸಂಸ್ಕರಣೆ ಹಾಗೂ ರಫ್ತು ಸಾಮರ್ಥ್ಯದ ಬಗ್ಗೆ ಸಕಲೇಶಪುರದ ಸಂಬಾರು ಮಂಡಳಿಯ ಪ್ರಾಂತೀಯ ಕಚೇರಿಯ ಹಿರಿಯ ಕ್ಷೇತ್ರಾಧಿಕಾರಿ ಎಸ್‌.ಕುಮಾರ್‌, ಪಿಎಂಎಫ್‌ಎಂಇ ಮತ್ತಿತರೆ ಯೋಜನೆಗಳಿಂದ ಸಂಬಾರು ಬೆಳೆಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಪ್ರಕ್ರಿಯೆಯಲ್ಲಿ ದೊರಕುವ ಸೌಲಭ್ಯಗಳು ಕುರಿತು ತೋಟಗಾರಿಕೆ ಉಪನಿರ್ದೇಶಕ (ಕೆಎಬಿಡಿಸಿ-ಕೆಪೆಕ್) ಟಿ.ಸಿದ್ದಲಿಂಗೇಶ್ವರ, ಸಂಬಾರು ಬೆಳೆಗಳ ರಫ್ತು ಪ್ರಕ್ರಿಯೆಯಲ್ಲಿ ಪ್ಯಾಕೇಜಿಂಗ್‌ನ ಮಹತ್ವ (ಆನ್‌ಲೈನ್) ಕುರಿತು ಎನ್‌ಐಎಫ್‌ಟಿಇಎಂ ಸಂಸ್ಥೆಯ ಪ್ರಾಧ್ಯಾಪಕ ಎಸ್‌.ಆನಂದ್‌ ಕುಮಾರ್‌, ಸಂಬಾರು ಬೆಳೆಗಳ ಉತ್ತೇಜನೆಗೆ ಸಂಬಾರು ಮಂಡಳಿಯಿಂದ ದೊರಕುವ ಸೌಲಭ್ಯಗಳ ಬಗ್ಗೆ ಸಕಲೇಶಪುರದ ಸಂಬಾರು ಮಂಡಳಿಯ ಪ್ರಾಂತೀಯ ಕಚೇರಿಯ ಹಿರಿಯ ಕ್ಷೇತ್ರಾಧಿಕಾರಿ ಎಸ್‌.ಕುಮಾರ್‌, ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಇ-ಕಾಮರ್ಸ್ ಮತ್ತು ಡಿಜಿಟಲ್ ಮಾರ್ಕೇಟಿಂಗ್‌ನ ಅವಶ್ಯಕತೆ ಬಗ್ಗೆ ಝೆಪ್ಟೋ ಹಿರಿಯ ವ್ಯವಸ್ಥಾಪಕ ಎಂ.ಎಸ್.ಜಿತೇಂದ್ರ ವಿಚಾರ ಮಂಡನೆ ಮಾಡಿದರು.

ಸಂಬಾರು ಉತ್ಪನ್ನಗಳ ವ್ಯವಹಾರ ಕ್ಷೇತ್ರದ ಯಶಸ್ವಿ ಉದ್ಯಮಿ ಶಿರಸಿಯ ಕದಂಬ ಮಾರುಕಟ್ಟೆ ಸೌಹಾರ್ದ ಸಹಕಾರ ಸಂಸ್ಥೆಯ ವಿಶ್ವೇಶ್ವರ ಭಟ್ ಅವರು ಸಂವಾದ ನಡೆಸಿದರು.


ಕೆಪೆಕ್‌ನಿಂದ 90 ಸಾವಿರದಿಂದ 1 ಲಕ್ಷ ಉದ್ಯೋಗ ಸೃಷ್ಟಿ

ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನಾ ಮಾತನಾಡಿ, ಕೆಪೆಕ್‌ ನಿಂದ ಈವರೆಗೆ 9 ಸಾವಿರ ಸಾಲ ವಿತರಣೆ ಮಾಡುವ ಮೂಲಕ ಸುಮಾರು 90 ಸಾವಿರ ದಿಂದ 1 ಲಕ್ಷ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಾಗಿದೆ. ಕೆಪೆಕ್‌ ನಿಂದ 10 ಲಕ್ಷ ರು. ಸಾಲ ಪಡೆದುಕೊಂಡರೆ ಶೇ.50 ರಷ್ಟು 5 ಲಕ್ಷ ರು. ಸರ್ಕಾರವೇ ರಿಯಾಯಿತಿ ನೀಡಲಾಗುತ್ತದೆ. 15 ಲಕ್ಷ ರು. ವರೆಗೆ ರಿಯಾಯಿತಿ ನೀಡಲಾಗುತ್ತದೆ. ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು. ಉದ್ಯೋಗದಾತರಾಗಬೇಕು ಎಂದು ಹೇಳಿದರು.

ತಜ್ಞರಿಂದ 10 ವಿಚಾರ ಮಂಡನೆ

ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು ಹಾಗೂ ಕೊಯ್ಲು ಪ್ರಕ್ರಿಯೆ ಹಾಗೂ ಕೊಯ್ಲಿನ ನಂತರದ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತು ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜಪ್ಪ ಅಡಿವೆಪ್ಪರ್‌, ಕಾಳುಮೆಣಸು ಸಂಸ್ಕರಣೆ ಮತ್ತು ಮೌಲ್ಯವರ್ಧನೆ (ಆನ್‌ಲೈನ್‌ ಅಧಿವೇಶನ) ಕುರಿತು ಕೇರಳ ಐಐಎಸ್‌ಆರ್‌ನ ನಿರ್ದೇಶಕ ಹಾಗೂ ಪ್ರಧಾನ ವಿಜ್ಞಾನಿ ಡಾ.ಟಿ.ಜಾನ್‌ ಝಕಾರಿಯಾ, ಕಾಳುಮೆಣಸು ಮತ್ತು ಇತರೆ ಸಂಬಾರು ಉತ್ಪನ್ನಗಳ ರಫ್ತು ಪ್ರಕ್ರಿಯೆ-ಮೂಲಭೂತ ಅವಶ್ಯಕತೆಗಳ ಪರಿಚಯ ಬಗ್ಗೆ ಸಂಬಾರು ಮಂಡಳಿ ಉಪ ನಿರ್ದೇಶಕ (ನಿವೃತ್ತ) ಡಾ.ಜಿ.ಕೆ.ವಿದ್ಯಾಶಂಕರ್ ಮಾತನಾಡಿದರು.