ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.ಸಮೀಪದ ಆನವೇರಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕದ ಬೋರ್ಡ್ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 15 ರಿಂದ 30 ವರ್ಷಗಳ ಹಿಂದೆಯೇ ರೈತರು ಜಮೀನನ್ನು ಉಳುಮೆ ಮಾಡುತ್ತಿದ್ದು, ಇದೀಗ ಸರ್ಕಾರ ಅಧಿಕಾರಗಳ ಮೂಲಕ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆಸುತ್ತಿದೆ. ಹೀಗೆ ಮುಂದುವರೆದರೆ ರೈತರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರ ಸಮಸ್ಯೆಗಳ ಬಗ್ಗೆ ಹೊರಾಟ ಮಾಡಲು ರೈತ ಸಂಘಟನೆಯನ್ನ ಬಲಪಡಿಸಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನ ಕೇಂದ್ರ ಸರ್ಕಾರ ವಾಪಸ್ಸು ಪಡೆದಿದ್ದು, ಆದರೆ ರಾಜ್ಯ ಸರ್ಕಾರ ಇನ್ನೂ ವಾಪಸ್ಸು ಪಡೆದಿಲ್ಲ. ತಕ್ಷಣವೇ ಕೃಷಿ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು. ರೈತರು ಮುಂದೆ ಒಗ್ಗಟ್ಟಾಗಿ ಯಾವುದೇ ಸರ್ಕಾರ ಯಾವುದೇ ತಪ್ಪುನಿರ್ಧಾರ ಕೈಗೊಂಡರು ಸಹ ಎಚ್ಚರಿಸುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ರೈತರಿಗೆ ನೋಟಿಸ್ ನೀಡುವ ಮೂಲಕ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆದಿದೆ. ಅಲ್ಲದೇ ರೈತರ ಜಮೀನ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿದ್ದು, ಇದನ್ನು ಖಂಡಿಸಿ ವಿಜಯಪುರ ಜಿಲ್ಲೆಯಲ್ಲಿ ರೈತ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳು ಕಾಲಾವಕಾಶ ಕೇಳಿದ್ದಾರೆ. ಇದೆಲ್ಲವೂ ಸರಿಯಾಗಲಿದೆ ಎಂಬ ಭರವಸೆ ನೀಡಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದ್ದೆ ಆದಲ್ಲಿ ರೈತರೇ ಸರ್ಕಾರಕ್ಕೆ ಸಾಲ ನೀಡಬಹುದು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರ ಬಗ್ಗೆ ಕಾಳಜಿ ಇಲ್ಲ. ಕೂಲಿ ಕಾರ್ಮಿಕರು, ವ್ಯಾಪಾರಿಗಳು, ಹಮಾಲರು ಸೇರಿದಂತೆ ಎಲ್ಲರೂ ಸಹ ತಮ್ಮ ಸಂಘಟನೆಯ ಮೂಲಕ ತಮಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ರೈತರೇ ಮಾಲೀಕರು, ರೈತರು ದುಡಿದು ಅರ್ಧ ಬೆಲೆಗೆ ಆಹಾರ ಪದಾರ್ಥ, ಹಾಲು, ಭತ್ತ ಸೇರಿದಂತೆ ಇನ್ನಿತರ ದಿನಸಿ ಸಮಾನುಗಳನ್ನು ಮಾರಟ ಮಾಡುತ್ತಿರುವುದರಿಂದ ದೇಶದ ಆರ್ಥಿಕತೆ ಉತ್ತಮವಾಗಿದೆ. ಅಲ್ಲದೇ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ನಾವು ಸಂಬಳಕ್ಕೆ ಕೆಲಸ ಮಾಡುವವರು, ಅವರಿಗೆ ಯಾವುದೇ ಕಾರಣಕ್ಕೂ ಎದುರುವ ಪ್ರಶ್ನೆಯೇ ಇಲ್ಲ. ನ.26 ರಂದು ರೈತರ ಎಲ್ಲಾ ಸಮಸ್ಯೆಗಳ ಬಗ್ಗೆ ದೇಶದ 500ಕ್ಕೂ ಹೆಚ್ಚು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗುವುದು ಎಂದ ಅವರು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷ ಎಂ.ಮಹದೇವಪ್ಪ, ಎಂ.ಆರ್ ರಾಜರಾವ್, ಎಂ.ಎಸ್ ತಿಮ್ಮಪ್ಪ, ತಾಲೂಕು ಗೌರವಾಧ್ಯಕ್ಷ ಎಂ.ಹೆಚ್ ತಿಮ್ಮಪ್ಪ, ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಉಪಾಧ್ಯಕ್ಷ ಇ.ತಿಮ್ಮಪ್ಪ, ಮುಖಂಡರಾದ ಎಚ್.ಗಂಗಾಧರಪ್ಪ, ಜಗದೀಶ್ ಗೌಡ್ರು, ದಾನೇಶಪ್ಪ, ಮಹದೇವಪ್ಪ, ಕುಪೇಂದ್ರಪ್ಪ, ನಟರಾಜ್ ಗೌಡ್ರು ಸೇರಿ ಇತರರಿದ್ದರು.