ದಿತ್ವಾ​​ ಚಂಡಮಾರುತದಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಹೊಲಗಳಲ್ಲೇ ರಾಗಿ ಬೆಳೆ ನೆಲಕಚ್ಚುತ್ತಿದೆ. ಮಳೆಯಿಂದ ರಾಗಿ ಬೆಳೆ ಕಟಾವಿಗೆ ಅಡ್ಡಿಯಾಗಿದೆ. ಈಗ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಕೆಲವೆಡೆ ತೆನೆ ಕೊಯ್ದು ಹೊಲದಲ್ಲಿ ರಾಶಿ ಹಾಕಲಾಗಿದೆ. ಈಗ ಮಳೆ ಬರುತ್ತಿರುವುದರಿಂದ, ರೈತರು ತೆನೆ ರಾಶಿ ಮೇಲೆ ಟಾರ್ಪಾಲು ಹೊದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದಿತ್ವಾ ಚಂಡಮಾರುತದಿಂದಾಗಿ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ರಾಗಿ ಬೆಳೆ ನೆಲಕಚ್ಚಿದ್ದು ರೈತರು ಆತಂಕಗೊಂಡಿದ್ದಾರೆ.

ಜಿಲ್ಲೆಯ ಪ್ರಮುಖ ಆಹಾರ ಬೆಳೆ ರಾಗಿಯಾಗಿದ್ದು, ಕಳೆದ ಬಾರಿಯೂ ಇದೇ ಸಮಯದಲ್ಲಿ ಫೆಂಗಲ್ ಚಂಡಮಾರುತದಿಂದ ರಾಗಿ ಬೆಳೆ ಶೇ 30 ರಷ್ಟು ನಾಶವಾಗಿ, ಜಾನುವಾರುಗಳ ಮೇವಿಗೂ ಪರದಾಡುವಂತಾಗಿತ್ತು.

ಕೊಯ್ಲು ಆರಂಭದಲ್ಲೇ ಮಳೆಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದ ಭರ್ಜರಿ ಫಸಲು ಬಂದಿದೆ. ಈಗಾಗಲೇ ಕೊಯ್ಲು ಕಾರ್ಯ ಪ್ರಾರಂಭವಾಗಿದೆ. ಆದರೆ, ದಿತ್ವಾ​​ ಚಂಡಮಾರುತದಿಂದ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಹೊಲಗಳಲ್ಲೇ ರಾಗಿ ಬೆಳೆ ನೆಲಕಚ್ಚುತ್ತಿದೆ. ಮಳೆಯಿಂದ ರಾಗಿ ಬೆಳೆ ಕಟಾವಿಗೆ ಅಡ್ಡಿಯಾಗಿದೆ. ಈಗ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಕೆಲವೆಡೆ ತೆನೆ ಕೊಯ್ದು ಹೊಲದಲ್ಲಿ ರಾಶಿ ಹಾಕಲಾಗಿದೆ. ಈಗ ಮಳೆ ಬರುತ್ತಿರುವುದರಿಂದ, ರೈತರು ತೆನೆ ರಾಶಿ ಮೇಲೆ ಟಾರ್ಪಾಲು ಹೊದಿಸಿದ್ದಾರೆ.

ಬೆಳೆ ಕಟಾವಾಗದ ಹೊಲಗಳಲ್ಲಿ ತೆನೆ ಉದುರುತ್ತಿದೆ. ಇನ್ನು ಕೆಲವಡೆ ರಾಗಿ ತೆನೆಯ ತುಂಬಾ ನೀರು ತುಂಬಿದ್ದು, ಈ ನೀರಿನಿಂದ ನೆನೆದ ರಾಗಿ ಮುಂದಿನ ನಾಲ್ಕೈದು ದಿನಗಳಲ್ಲಿ ತೆನೆಯಲ್ಲಿಯೇ ಮೊಳಕೆ ಯೊಡೆದು ಹಾಳಾಗಲಿದೆ. ಜಿಲ್ಲೆಯಲ್ಲಿ ಸಾವಿರಾರು ಎಕರೆಯ ರಾಗಿ ಹೊಲ ಮಳೆಗೆ ಹಾನಿಯಾಗಿದೆ. ರಾಗಿ ಹೊಲಗಳು ಮಳೆಯಿಂದ ನೆಲಕಚ್ಕಿವೆ. ಮಳೆ ನಿಂತರೆ ರಾಗಿ ಕಟಾವು ಕಾರ್ಯ ಪ್ರಾರಂಭವಾಗುತ್ತೆ. ಹೀಗೆ ಮಳೆ ಮುಂದುವರಿದರೆ ಅತಿಯಾದ ತೇವಾಂಶದಿಂದ ರಾಗಿ ಬೆಳೆ ಹೊಲದಲ್ಲಿಯೇ ಮೊಳಕೆ ಬರಲು ಪ್ರಾರಂಭಿಸುತ್ತದೆ.

ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ ಎಂದು ರೈತರು ಆತಂಕಗೊಂಡಿದ್ದಾರೆ. ಸದ್ಯ ರೈತರು ರಾಗಿ ಕಟಾವ್ ಮಾಡಲು ಮಳೆ ನಿಲ್ಲಲು ಮತ್ತು ಬಿಸಿಲಿಗಾಗಿ ಎದುರು ನೋಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಿರಂತರವಾಗಿ ಮಳೆ ಸುರಿದ ಕಾರಣ, ಹಲವೆಡೆ ರಾಗಿ ಪೈರು ಹಾನಿಗೊಂಡಿತ್ತು. ಇದರಿಂದಾಗಿ ಇಳುವರಿ ಕುಂಠಿತವಾಗಿತ್ತು. ಹುಲ್ಲು ಹಾಳಾಗಲು ಕಾರಣವಾಯಿತು. ತೆನೆ ಒಣಗಿದ ಮೇಲೆ ರಾಗಿ ಕೊಯ್ಲಿಗೆ ರೈತರು ಮುಂದಾಗಿದ್ದರು. ಒಂದಷ್ಟು ರೈತರು ಕೊಯ್ದು ಮುಗಿಸಿದ್ದರು. ಆದರೆ ಈಗ ಜಡಿ ಮಳೆಯಿಂದಾಗಿ ಕೊಯ್ಲಿಗೆ ತೊಂದರೆ ಹಾಗೂ ಬೆಳೆಗೆ ಹಾನಿಯಾಗಿದೆ. ಕಟಾವು ಮಾಡಿದ ರಾಗಿಯ ತೆನೆಗಳನ್ನು ಮಳೆಯಿಂದ ರಕ್ಷಿಸಿಕೊಳ್ಳುವುದೇ ರೈತರಿಗೆ ಕಷ್ಟವಾಗಿದೆ.

ತರಕಾರಿ ಬೆಳೆಗಳಿಗೆ ರೋಗಬಾಧೆ

ಈಗ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ತೋಟಗಾರಿಕಾ ಬೆಳೆಗಳಾದ ಕ್ಯಾರೆಟ್, ಬೀಟ್‌ರೂಟ್, ಹೂಕೋಸು, ಆಲೂಗಡ್ಡೆಯೂ ಕೊಳೆಯುವ ಸ್ಥಿತಿಗೆ ಬಂದಿದೆ. ಹಿರೇಕಾಯಿ, ಹಾಗಲಕಾಯಿ, ಸೊರೇಕಾಯಿ, ಬದನೆಕಾಯಿ ಮತ್ತು ಬೀನ್ಸ್‌ಗೆ ರೋಗಬಾಧೆ ತಟ್ಟುವ ಆತಂಕ ಎದುರಾಗಿದೆ. ಸೊಪ್ಪುಗಳಂತು ತೋಟಗಳಲ್ಲಿಯೇ ಸಂಪೂರ್ಣ ಕೊಳೆಯುತ್ತಿವೆ. ದ್ರಾಕ್ಷಿ, ದಾಳಿಂಬೆ ಬೆಳೆಗಾರರ ಪಾಡಂತೂ ಹೇಳತೀರದಾಗಿದೆ. ತಂಪಾದ ವಾತಾವರಣ ಇರುವುದರಿಂದ ಔಷಧ ಸಿಂಪಡಣೆಗೂ ಅಡ್ಡಿಯಾಗುತ್ತಿದೆ. ಹೂವಿನ ತೋಟಗಳಲ್ಲಿ ಗುಲಾಭಿ, ಸೇವಂತಿ, ಚೆಂಡು ಹೂವು ಬೆಳೆ ಮಳೆಯಿಂದ ನಾಶವಾಗಿವೆ.