Farmers worried about the disease affecting chilli crops

-ರೈತರ ಪಾಲಿಗೆ ವಾಣಿಜ್ಯ ಬೆಳೆ ಮೆಣಸಿನಕಾಯಿಗೆ ಗಂಟು ಬಿದ್ದ ರೋಗ । ಇಳುವರಿ ಕುಂಠಿತ । ರೈತರಿಗೆ ನಷ್ಟದ ಹೊರೆ

----

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲಪುರ

ರೈತರ ಪಾಲಿಗೆ ಪ್ರಮುಖ ವಾಣಿಜ್ಯ ಬೆಳೆ ಮೆಣಸಿನಕಾಯಿಗೆ ರೋಗಗಳು ಗಂಟು ಬಿದ್ದಿದ್ದು, ಇಳುವರಿ ಕುಂಠಿತ ಜೊತೆಗೆ ಬೆಲೆ ಕಡಿಮೆಯಾಗಿದ್ದು, ರೈತರಿಗೆ ನಷ್ಟದ ಹೊರೆಯಾಗಿದೆ.

ತಾಲೂಕಿನ ಮಣ್ಣೂರ ಹೊಸೂರ ಶೇಷಗಿರಿ ಶಿವಬಾಳನಗರ ದೇವಪ್ಪ ನಗರ ಉಪ್ಪಾರವಾಡಿ ರಾಮನಗರ ದಯಾನಂದನಗರ ಕುಡಗನೂರ ಶಿವೂರ ಕರಜಗಿ ಮಾಶಾಳ ದಿಕ್ಸಂಗಾ ಉಡಚಣ ಭೋಸಗಾ ದುದ್ದಣಗಿ ಮಂಗಳೂರ ಅಳ್ಳಗಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದಾರೆ. ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಗೆ ಬೂದಿ ರೋಗ, ಎಲೆ ಮುಟುರು ರೋಗ ಕಾಣಿಸಿಕೊಂಡಿದ್ದು, ರೈತರಿಗೆ ನಷ್ಟದ ಭೀತಿ ಎದುರಾಗಿದೆ.

ಬೆಳೆ ಉತ್ತಮವಾಗಿ ಬಂದಿದೆ ಎಂದು ನೆಮ್ಮದಿಯಿಂದ ಇದ್ದ ರೈತರಿಗೆ ಒಂದಿಲ್ಲೊಂದು ತೊಂದರೆ ಬಂದೇ ಬರುತ್ತದೆ. ಇದೀಗ ಮೆಣಸಿನಕಾಯಿ ಬೆಳೆಗೆ ಎಲೆ ಮುಟುರು ಹಾಗೂ ಬೂದಿರೋಗ ಬಾಧಿಸುತ್ತಿದೆ.

ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎನ್ನುತ್ತಾರೆ ದಯಾನಂದನಗರ ಗ್ರಾಮದ ರೈತ ಅಣ್ಣಪ್ಪ, ಬಿಜಾಪುರ, ರಾಮನಗರದ ರೈತ ಭೀಮಣ್ಣ ಹಡಲಗಿ.

ಬೆಳೆ ವಿವರ: ಕಳೆದ ವರ್ಷ 500 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಮಳೆ ಕೊರತೆ ಹಾಗೂ ಬೆಲೆ ಕುಸಿತದಿಂದ ರೈತರು ತತ್ತರಿಸಿ ಹೋಗಿ ಈ ವರ್ಷ ಅದಕ್ಕಿಂತ ಕಡಿಮೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

ಈಗ ಮೆಣಸಿನಕಾಯಿ ಹೂವು ಬಿಡುವ ಹಂತಕ್ಕೆ ಬಂದಿವೆ. ಮೆಣಸಿನಕಾಯಿ ಬೆಳೆಗೆ ಬೂದಿ ಹಾಗೂ ಮುಟುರು ರೋಗ ಬಾಧೆ ಆವರಿಸಿದೆ.

ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ರೋಗ ಆವರಿಸುತ್ತಿದೆ. ರೋಗ ಬಂದ ಗಿಡಗಳು ಸಂಪೂರ್ಣ ಒಣಗುತ್ತಿವೆ.

ಇನ್ನು ಮೆಣಸಿನಕಾಯಿ ಪೂರ್ಣ ಪ್ರಮಾಣದಲ್ಲಿ ಬೆಳೆಯದೆ ಗಿಡದಲ್ಲಿಯೇ ಬಾಡುತ್ತಿದೆ. ಕೊಳೆವ ಹಂತಕ್ಕೆ ಬಂದಿವೆ. ರೋಗ ಹತೋಟೆಗೆ ರೈತರು ನಾನಾ ಕಸರತ್ತು ನಡೆಸುತ್ತಿದ್ದು, ವಿವಿಧ ಕ್ರಿಮಿನಾಶಕ ಸಿಂಪಡಿಸುತ್ತಿದ್ದಾರೆ.

ಖರ್ಚು ವ್ಯರ್ಥ: ಮೆಣಸಿನಕಾಯಿ ಬೆಳೆಯಲು ರೈತರು ಎಕರೆಗೆ ಕನಿಷ್ಠ 1ಲಕ್ಷದಿಂದ ರಿಂದ 1.50ಲಕ್ಷ ರು. ಖರ್ಚು ಮಾಡಿದ್ದಾರೆ. ಈ ವರ್ಷ ದುಬಾರಿ ಕ್ರಿಮಿನಾಶಕ ಸಿಂಪರಣೆಯಿಂದ ಎಕರೆಗೆ ಸರಾಸರಿ 1ಲಕ್ಷ ರು. ಖರ್ಚಾಗಿದೆ. ಪ್ರತಿವರ್ಷ ಎಕರೆಗೆ ಸರಾಸರಿ 18 ರಿಂದ 25 ಕ್ವಿಂಟಲ್‌ ಇಳುವರಿ ಬರುತ್ತಿತ್ತು. ಆದರೆ, ಈ ವರ್ಷ ರೋಗಗಳು ಕಾಣಿಸಿಕೊಂಡಿರುವುದರಿಂದ 10 ರಿಂದ 12 ಕ್ವಿಂಟಲ್‌ ಇಳುವರಿ ಬರಬಹುದು ಎಂದು ಅಂದಾಜಿಸಿದ್ದು, ಪ್ರಸಕ್ತ ಮಾರುಕಟ್ಟೆಯಲ್ಲೂ ವಹಿವಾಟು ಪಾತಾಳಕ್ಕೆ ಕುಸಿದಿದೆ.

ತಾಲೂಕಿನ ರೈತರು ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ. ಅವರಿಗೆ ಸರಿಯಾದ ಬೆಲೆ ಸಿಗದೇ ಕಂಗಲಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕು .ಸರ್ಕಾರಕ್ಕೆ ರೈತರಿಗೆ ನೆರವು ನೀಡುವ ಕಾಳಜಿ ಇದ್ದರೆ ರೈತರು ಮೆಣಸಿನಕಾಯಿ ಬಿತ್ತುವ ಸಮಯದಲ್ಲಿ ಬೆಲೆ ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಾರುಕಟ್ಟೆ ತೆರೆಯಲು ಆಗ್ರಹ: ತಾಲೂಕಿನಲ್ಲಿ ಸಾವಿರಾರು ರೈತರು ಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಸೂಕ್ತವಾದ ಮಾರುಕಟ್ಟೆ ಇಲ್ಲದೆ ಸೋಲಾಪುರ, ಹೈದ್ರಾಬಾದ್, ಕರ್ನೂಲ್ ಗುಂಟೂರ್ ದೂರದ ನಗರಗಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿ ಒಳ್ಳೆ ಬೆಲೆ ಸಿಕ್ಕದೆ, ಚಿಂತೆ ಇಲ್ಲ. ಲಾರಿ ಬಾಡಿಗೆ ಹಮಾಲಿ, ಮೆಣಸಿನಕಾಯಿ ಬೆಳೆಯಲು ಮಾಡಿದ ಸಾಲ ಸೇರಿದರೆ ಸಾಲ ಕಟ್ಟಲಾಗದ ಸ್ಥಿತಿಯಲ್ಲಿ ರೈತರಿದ್ದಾರೆ. ಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಚಿವರು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಲೂಕಿನ ರೈತರು ಮನವಿ ಮಾಡಿದ್ದಾರೆ.

ಹತ್ತಿ, ಹೆಸರು, ತೊಗರಿ ಬೆಳೆಗೆ ಇದ್ದಂತೆ ಮೆಣಸಿನಕಾಯಿ ಬೆಳೆಗೂ ಬೆಂಬಲ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ.

ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕೆಂದು ಅಣ್ಣಪ್ಪ ಬಿಜಾಪುರ, ಭೀಮಣ್ಣ ಹಡಲಗಿ ಮನವಿ ಮಾಡಿದ್ದಾರೆ.

-