ಅಕಾಲಿಕ ಮಳೆ, ಹವಾಮಾನ ವೈಪರೀತ್ಯಕ್ಕೆ ಬೆಳೆಗಾರರ ಆತಂಕ

| Published : Oct 15 2025, 02:08 AM IST

ಸಾರಾಂಶ

ಈ ಬಾರಿ ಅರೇಬಿಕಾ ಕಾಫಿಗೆ ಬಂಪರ್‌ ಬೆಲೆ ಬಂದಿದೆ. ಅಕಾಲಿಕ ಮಳೆ ಹಿನ್ನಲೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತ ಪರಿಸ್ಥಿತಿ ಬೆಳೆಗಾರರು ಎದುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅರೇಬಿಕಾ ಮತ್ತು ರೋಬಾಸ್ಟ ಕಾಫಿ ತಳಿಗಳ ಪೈಕಿ ಈ ಬಾರಿ ಅರೇಬಿಕಾ ಕಾಫಿಗೆ ಬಂಪರ್ ಬೆಲೆ ಬಂದಿದೆ. ಆದರೆ ಹವಾಮಾನ ವೈಪರೀತ್ಯ, ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತ ಪರಿಸ್ಥಿತಿಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ.

ಕೊಡಗಿನ ಪ್ರಗತಿಪರ ಮತ್ತು ಸಮಗ್ರ ಕೃಷಿ ಮಾಡುವ ರೈತರ ಪೈಕಿ ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಮ್ಯಾಗುಡೂರು ತೋಟದ ಮಾಲೀಕರಲ್ಲಿ ಟಿ.ಕೆ.ಸಾಯಿಕುಮಾರ್ ಕೂಡ ಒಬ್ಬರು. ತಮ್ಮ ತೋಟದಲ್ಲಿ ಅರೇಬಿಕಾ ಕಾಫಿ ತಳಿ ಇತರ ಹಣ್ಣಿನ ಬೆಳೆಗಳನ್ನು ಬೆಳೆಯುತ್ತ ಪ್ರಗತಿಪರ ಕೃಷಿಕರು ಎನ್ನಿಸಿರುವ ಅವರು ಈ ಬಾರಿಯ ಅಕಾಲಿಕ ಮಳೆ ಮತ್ತು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅರೇಬಿಕಾ ಕಾಫಿ ಹಣ್ಣಾಗಿದ್ದು ಅದರ ಗುಣಮಟ್ಟದ ಸಂಸ್ಕರಣೆಗೆ ಎದುರಾಗುವ ಸವಾಲುಗಳನ್ನು ನೆನೆದು ಚಿಂತಿತರಾಗಿದ್ದಾರೆ. ಈಗಾಗಲೇ ಹೇಳಿದಂತೆ ಅರೇಬಿಕಾ ಕಾಫಿಗೆ ಅತ್ಯುತ್ತಮ ಬೆಲೆ ಬಂದಿದೆ. ಅದನ್ನು ಪಡೆಯುವಲ್ಲಿ ನಮ್ಮದಲ್ಲಾದ ಕಾರಣದಿಂದ ವಿಫಲರಾಗುತ್ತಿರುವುದು ನಿರಾಶೆ ಮೂಡಿಸಿದೆ. ಅದರೂ ಸವಾಲುಗಳನ್ನು ಎದುರಿಸಿ ಉತ್ತಮ ಗುಣಮಟ್ಟದ ಕಾಫಿ ಸಂಸ್ಕರಣೆಯನ್ನು ಮಾಡಿ ಅತ್ಯುತ್ತಮ ಬೆಲೆಯನ್ನು ಪಡೆಯುವುದು ನಮ್ಮ ಗುರಿಯಾಗಿದ್ದು ಆ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತರಾಗಿದ್ದೇವೆ. ಪಕೃತಿ ನಮ್ಮೊಂದಿಗೆ ಸಹಕರಿಸಬೇಕೆಂಬುದು ನಮ್ಮ ಪ್ರಾರ್ಥನೆಯಾಗಿದೆ ಎಂದು ಸಾಯಿಕುಮಾರ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಕಂಡು ಬರುತ್ತಿದ್ದು, ಹೊರಗಿನಿಂದ ಬರುವ ಕೆಲಸಗಾರರಿಗೆ ಕಾಫಿ ಸಂಸ್ಕರಣೆಯ ಕೆಲಸ ಗೊತ್ತಿದೆ ಇರುವುದು ದುಬಾರಿ ಕೂಲಿ ಹಿನ್ನಲೆಯಲ್ಲಿ ಸಣ್ಣ ಮತ್ತು ಮಧ್ಯಮ ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳಿಗೆ ಒಳಗಾಗಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಜೊತೆಗೆ ಕಾಡಾನೆ ಮಾತ್ರವಲ್ಲದೆ ಕಾಡುಕೋಣ ಕಾಡು ಹಂದಿ, ನವಿಲುಗಳು, ಮಂಗ ಕೆಲವು ಸಂದರ್ಭಗಳಲ್ಲಿ ವಿಷಪೂರಿತ ಹಾವುಗಳು ಸೇರಿದಂತೆ ನಾನ ರೀತಿಯ ಆತಂಕ ಆಪತ್ತುಗಳನ್ನು ಕೆಲಸಗಾರರು ಮತ್ತು ಮಾಲೀಕರು ಎದುರಿಸಬೇಕಾಗಿದೆ. ಇವೆಲ್ಲಾದರ ನಡುವೆ ಕಾಫಿ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಮೀರಿ ಜೌಟ್‌ಟರ್ನ್ ಕಾಯ್ದುಕೊಳ್ಳಬೇಕಾಗಿರುವುದು ಕೂಡ ಬೆಳೆಗಾರರ ಸವಾಲಾಗಿದೆ.