ಮಳೆಯಿಂದ ಹಳದಿ ಬಣ್ಣಕ್ಕೆ ತಿರುಗಿದ ರಾಗಿ ಬೆಳೆ : ರೈತರಲ್ಲಿ ಆತಂಕ

| N/A | Published : Aug 21 2025, 01:00 AM IST

ಸಾರಾಂಶ

 ನೆಲಮಂಗಲ ತಾಲೂಕಿನಲ್ಲೆಡೆ ಕಳೆದ ಹದಿನೈದು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಪ್ರತಿನಿತ್ಯ ಮುಂಜಾನೆಯಿಂದಲೇ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ.

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನಲ್ಲೆಡೆ ಕಳೆದ ಹದಿನೈದು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಪ್ರತಿನಿತ್ಯ ಮುಂಜಾನೆಯಿಂದಲೇ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ.

ನೆಲಮಂಗಲ ಪಟ್ಟಣ ಸೇರಿದಂತೆ ಸೋಂಪುರ, ತ್ಯಾಮಗೊಂಡ್ಲು ಹೋಬಳಿಗಳು ಸೇರಿದಂತೆ ತಾಲೂಕಿನ ವಿವಿಧೆಡೆ ವರುಣ ಅಬ್ಬರಿಸಿದ್ದು, ತಗ್ಗು ಪ್ರದೇಶಗಳು, ಕೆಲ ಬಡಾವಣೆಗಳ ರಸ್ತೆಗಳು ಜಲಾವೃತಗೊಂಡಿವೆ. ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ನೌಕರರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ತೆರಳಲು ಪರದಾಡುವಂತಾಗಿದೆ

ಹೊಲದಲ್ಲಿ ನಿಂತ ನೀರು: ಇತ್ತೀಚೆಗಷ್ಟೇ ತಾಲೂಕಿನಲ್ಲಿ ರೈತರು ಹೊಲಗಳಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಈಗಾಗಲೇ ರಾಗಿ ಬೆಳೆ ಚಿಗುರು ಹೊಡೆದಿದ್ದು, ಮಳೆ ಬಂದು ಹೊಲಗಳಲ್ಲಿ ನೀರು ಹೆಚ್ಚಾದ ಕಾರಣ ರಾಗಿ ಬೆಳೆ ಹಸಿರು ಬಣ್ಣಕ್ಕೆ ತಿರುಗಿದೆ.

ರೈತರಲ್ಲಿ ಹೆಚ್ಚಿದ ಆತಂಕ:

ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿರುವುದು ರಾಗಿ ಕೃಷಿಕರು, ಹೂವು ಬೆಳೆಯುವವರ ನಿದ್ದೆಯನ್ನು ಕಂಗೆಡಿಸಿದೆ. ಈಗಾಗಲೇ ತಾಲೂಕಿನ ಹಲವೆಡೆ ರೈತರು ರಾಗಿ ಬಿತ್ತನೆ ಮಾಡಿದ್ದು ರಾಗಿ ಬೆಳೆಗೆ ಕುಂಟೆ ಹೊಡೆಯಲು ಮಳೆ ಬಿಡುವು ಕೊಡುತ್ತಿಲ್ಲ. ಗೌರಿ ಗಣೇಶ ಹಬ್ಬ ಸಮೀಪಿಸಿದರೂ ಸೇವಂತಿಗೆ, ಬಟನ್ಸ್ ಗುಲಾಬಿ ಹೂವು ಹಾಕಿರುವ ರೈತರು ಹೂವು ಕೊಯ್ಯಲು ಸಾಧ್ಯವಾಗುತ್ತಿಲ್ಲ. ಮುಂದೆ ಇದೇ ರೀತಿ ಮಳೆ ಸುರಿದರೆ ಬೆಳೆ ಸಂಪೂರ್ಣ ಕೊಳೆಯುವ ಸ್ಥಿತಿಗೆ ಬರಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.

ತ್ಯಾಮಗೊಂಡ್ಲು ಹೋಬಳಿಯಲ್ಲಿ ಮಳೆ ಹೆಚ್ಚು:

ಜನವರಿಯಿಂದ ಇಲ್ಲಿಯ ತನಕ ನೆಲಮಂಗಲ ತಾಲೂಕಿನಲ್ಲಿ ಒಟ್ಟು 551.5 ಮಿ.ಮೀ. ಮಳೆಯಾಗಿದ್ದು ಶೇ.23ರಷ್ಟು ಅಧಿಕ ಮಳೆಯಾಗಿದೆ. ಜುಲೈ ತಿಂಗಳಲ್ಲಿ 73.5 ಮಿ.ಮೀ, ಜೂನ್‌ನಿಂದ ಇಲ್ಲಿಯವರೆಗೂ 290.5 ಮಿ.ಮೀ. ಮಳೆಯಾಗಿದ್ದು, ಕಳೆದೊಂದು ಒಂದು ವಾರದಿಂದ ಸೋಂಪುರ ಹೋಬಳಿಯಲ್ಲಿ 60 ಮಿ.ಮೀ., ತ್ಯಾಮಗೊಂಡ್ಲು ಹೋಬಳಿಯಲ್ಲಿ 95.6 ಮಿ.ಮೀ. ಕಸಬಾ ಹೋಬಳಿಯಲ್ಲಿ 52.6 ಮಿ.ಮೀ. ಮಳೆಯಾಗಿದೆ.

ವಾಡಿಕೆಗಿಂತ ಹೆಚ್ಚು ಮಳೆ:

ಕಳೆದ ಒಂದೂವರೆ ತಿಂಗಳಲ್ಲಿ ತಾಲೂಕಿನಲ್ಲಿ 252.9 ಮಿ.ಮೀ ಮಳೆಯಾಗಬೇಕಿತ್ತು. ಆದರೆ 290.5 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.15ರಷ್ಟು ಹೆಚ್ಚು ಮಳೆ ಸುರಿಯುತ್ತಿರುವುದು ಕೃಷಿಕರನ್ನು ಹಾಗೂ ವ್ಯಾಪಾರಸ್ಥರನ್ನು ಕಂಗೆಡಿಸಿದೆ. ಪ್ರತಿನಿತ್ಯ ಹಗಲು ವೇಳೆಯಲ್ಲಿ ಮಳೆ ಬರುತ್ತಿರುವುದು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ತರಕಾರಿ, ಹೂವು, ಹಣ್ಣಿನ ವ್ಯಾಪಾರಿಗಳು ಸಂರಕ್ಷಣೆ ಮಾಡಿಕೊಳ್ಳುವುದೇ ಸವಾಲಾಗಿದೆ.

 ಕಳೆದ ಜನವರಿ ತಿಂಗಳಿನಿಂದ ಇಲ್ಲಿಯವರೆಗೂ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೃಷಿ ಕೆಲಸಕ್ಕೆ ಮಳೆಯಿಂದ ಅಡ್ಡಿಯುಂಟಾಗಿದೆ. ತಾಲೂಕಾದ್ಯಂತ ಮಳೆಯಿಂದ ಸಣ್ಣಪುಟ್ಟ ಅನಾಹುತಗಳಾಗಿವೆ. ರೈತರು ಮಳೆಯ ಸಂದರ್ಭಗಳಲ್ಲಿ ಹೊಲಗದ್ದೆ ತೋಟಗಳಲ್ಲಿ ಜಾಗೃತರಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.

-ಸಿದ್ದಲಿಂಗಯ್ಯ, ಸಹಾಯಕ ಕೃಷಿ ನಿರ್ದೇಶಕರು, ನೆಲಮಂಗಲ

15 ದಿನಗಳಿಂದ ಬಿಡುವು ಕೊಡದೆ ಮಳೆ ಸುರಿಯುತ್ತಿದೆ. ಇದರಿಂದ ಬಿತ್ತನೆ ಮಾಡಿರುವ ರಾಗಿ ಪೈರು ಕೊಳೆಯುವ ಸ್ಥಿತಿಯಲ್ಲಿದ್ದು, ಕುಂಟೆ ಹೊಡೆಯಲು ಸಾಧ್ಯವಾಗುತ್ತಿಲ್ಲ. ಹೀಗೆ ಮಳೆ ಮುಂದುವರಿದರೆ ರಾಗಿ ತೆನೆ ಕಟ್ಟುವುದಿಲ್ಲ. ರಾಗಿ ಬೆಳೆ ನಾಶವಾಗಲಿದೆ ಎಂಬ ಆತಂಕದಲ್ಲಿದ್ದೇವೆ.

-ಈಶ್ವರಯ್ಯ, ರೈತ, ಹೊನ್ನೇನಹಳ್ಳಿ 

Read more Articles on