ಬರಗಾಲ ಮತ್ತು ಮಳೆ ಅತಿಯಾಗಿ ಬೆಳೆನಷ್ಟ ಅನುಭವಿಸಿದ ರೈತರ ನೆರವಿಗಾಗಿ ರೂಪಿಸಲಾದ ಹವಾಮಾನ ಆಧರಿತ ಈ ಯೋಜನೆಯಲ್ಲಿ ದೊಡ್ಡ ಮಟ್ಟದ ಲೂಟಿ ನಡೆಯುತ್ತಿದೆ.
ಮುಂಡರಗಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯು ಜಿಲ್ಲೆಯಲ್ಲಿ ಅಕ್ರಮಗಳ ಜಾಲವಾಗಿ ಮಾರ್ಪಟ್ಟಿದ್ದು, ನಿಜವಾದ ರೈತರಿಗೆ ಪರಿಹಾರ ಸಿಗದೆ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ಪಾಲಾಗುತ್ತಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ್ ಗಂಭೀರ ಆರೋಪ ಮಾಡಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲ ಮತ್ತು ಮಳೆ ಅತಿಯಾಗಿ ಬೆಳೆನಷ್ಟ ಅನುಭವಿಸಿದ ರೈತರ ನೆರವಿಗಾಗಿ ರೂಪಿಸಲಾದ ಹವಾಮಾನ ಆಧರಿತ ಈ ಯೋಜನೆಯಲ್ಲಿ ದೊಡ್ಡ ಮಟ್ಟದ ಲೂಟಿ ನಡೆಯುತ್ತಿದೆ. ಮಧ್ಯವರ್ತಿಗಳು ಪ್ರಭಾವಿ ಹಾಗೂ ಇತರೆ ಕೆಲವು ರೈತರ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್‌ಗಳನ್ನು ಪಡೆದುಕೊಂಡು ತಾವೇ ಪ್ರೀಮಿಯಂ ಹಣ ಪಾವತಿಸುತ್ತಿದ್ದಾರೆ. ವಿಮಾ ಪರಿಹಾರ ಮಂಜೂರಾದ ತಕ್ಷಣ ಅರ್ಧದಷ್ಟು ಮೊತ್ತವನ್ನು ನೇರವಾಗಿ ಮಧ್ಯವರ್ತಿಗಳು ಕಮಿಷನ್ ರೂಪದಲ್ಲಿ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಈ ಅಕ್ರಮಕ್ಕೆ ಕೆಲ ಬ್ಯಾಂಕ್ ಸಿಬ್ಬಂದಿಗಳ ಕುಮ್ಮಕ್ಕೂ ಇದೆ ಎಂದು ದೂರಿದರು.ತೋಟಗಾರಿಕೆ ಬೆಳೆಗಳು ಇಲ್ಲದ ಜಮೀನುಗಳಲ್ಲೂ ಜಿಪಿಎಸ್ ಮತ್ತು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು, ಸುಳ್ಳು ಸಮೀಕ್ಷಾ ವರದಿ ತಯಾರಿಸಲಾಗುತ್ತಿದೆ. ಕೃಷಿ ಅಧಿಕಾರಿಗಳು, ಕಂದಾಯ ಇಲಾಖೆ ಹಾಗೂ ವಿಮಾ ಕಂಪನಿಗಳ ಪ್ರತಿನಿಧಿಗಳು ಶಾಮೀಲಾಗಿ ನೈಜವಾಗಿ ಬೆಳೆ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ಪಾಳು ಭೂಮಿ ಎಂದು ತೋರಿಸಿ ವಿಮೆಯಿಂದ ರೈತರನ್ನು ವಂಚಿಸಲಾಗುತ್ತಿದೆ. ಆದರೆ ಯಾವುದೇ ಬೆಳೆ ಬೆಳೆಯದ ಅಥವಾ ತೋಟಗಾರಿಕೆ ಬೆಳೆ ಇಲ್ಲದ ಕೆಲವು ಪ್ರಭಾವಿ ರೈತರಿಗೆ ನಿಯಮಬಾಹಿರವಾಗಿ ವಿಮೆ ಮಂಜೂರು ಮಾಡಲಾಗುತ್ತಿದೆ ಎಂದರು.ಈ ಹಗರಣದ ಬೇರುಗಳನ್ನು ಬಯಲಿಗೆಳೆಯಲು ರಾಜ್ಯ ಸರ್ಕಾರ ಕೂಡಲೇ ವಿಶೇಷ ತನಿಖಾ ದಳ(ಎಸ್ಐಟಿ) ರಚಿಸಿ ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಗದಗ: ಜಿಲ್ಲೆಯ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ 2026- 27ನೇ ಸಾಲಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಜಿಲ್ಲೆಯ ರೈತ ಮತ್ತು ರೈತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆ. 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತ ರೈತರು ಅರ್ಜಿಗಳನ್ನು ತಮ್ಮ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಡೆದು ಸಂಪೂರ್ಣ ಮಾಹಿತಿಯನ್ನು ದಾಖಲಾತಿಗಳೊಂದಿಗೆ ಸಂಬಂಧಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಗದಗ ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.