ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ಪಟ್ಟಣದ ಸ್ಟಡ್ ಫಾರಂನಲ್ಲಿ ಇಂಟರ್‌ಗ್ರೇಟೆಡ್ ಟೌನ್ಶಿಪ್ ಮಾಡಲು ಮುಂದಾಗಿರುವ ಸರ್ಕಾರದ ವಿರುದ್ಧ ಹಲವಾರು ಸಂಘ ಸಂಸ್ಥೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಿ ಯಶಸ್ವಿಯಾದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಗೊಂಡ ಸಾವಿರಾರು ಹೋರಾಟಗಾರರು ಸರ್ಕಾರ, ಶಾಸಕರು ಮತ್ತು ಸಂಸದರ ವಿರುದ್ಧ ಹಲವಾರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಸಿ ಮಂದಿರದಿಂದ ಹೊರಟ ಹೋರಾಟಗಾರರು ಸ್ಟಡ್ ಫಾರಂ ಸರ್ಕಲ್ ಕೆಎಸ್ಆರ್‌ಟಿಸಿ ಸರ್ಕಲ್ ಮತ್ತು ಗ್ರಾಮ ದೇವತೆ ಹಾಗೂ ಹುಚ್ಚ ಮಾಸ್ತಿಗೌಡ ವೃತ್ತದ ಮುಖಾಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ತೆರಳಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಜಮಾವಣೆಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ಇತಿಹಾಸ ತಜ್ಞ ಹಾಗೂ ಹೋರಾಟಗಾರರಾದ ನಂಜರಾಜ ಅರಸ್, ಪುರಾತನ ಕಾಲದಿಂದ ಈ ಕುದುರೆ ಫಾರಂಅನ್ನು ರಕ್ಷಣೆ ಮಾಡುವ ಕೆಲಸವನ್ನು ಆಡಳಿತ ವ್ಯವಸ್ಥೆ ಮಾಡಿಕೊಂಡು ಬಂದಿದೆ. ಆದರೆ ಈಗಿನ ಸಿದ್ದರಾಮಯ್ಯನ ಸರ್ಕಾರ ಅದನ್ನು ಸಂಪೂರ್ಣವಾಗಿ ಮುಗಿಸಿ ಕಟ್ಟಡದ ಕಾಡು ಮಾಡಿ ಶ್ರೀಮಂತರಿಗೆ ಅವಕಾಶ ಮಾಡಿಕೊಡುವ ದುರಾಡಳಿತ ಮುಖ್ಯ ಮುಂದಾಗಿದೆ. ಇಂತಹ ಅದೃಷ್ಟ ವ್ಯವಸ್ಥೆಯ ವಿರುದ್ಧ ಪ್ರತಿಯೊಬ್ಬರೂ ಹೋರಾಟ ಮಾಡಬೇಕಿದೆ. ನನಗೆ 80ರ ಇಳಿ ವಯಸ್ಸು ಆದರೂ ಕೂಡ ನನ್ನ ಚೈತನ್ಯ ಮಾತ್ರ ಇನ್ನು 18ರ ಪ್ರಾಯ ಆ ಕುದುರೆ ಫಾರಂ ಉಳಿವಿಗಾಗಿ ನಾನು ಅಮರಣಾಂತರ ಉಪವಾಸ ಮಾಡುವುದಾಗಿ ಘೋಷಿಸಿದರು.
ಇದಕ್ಕೆ ಧ್ವನಿಗೂಡಿಸಿದ ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ, ಸಾಮಾಜಿಕ ಹೋರಾಟಗಾರರಾದ ಬಿ.ಟಿ. ಲಲಿತಾ ನಾಯಕ್, ಸೇರಿದಂತೆ ಹಲವಾರು ಪ್ರತಿಭಟನಾಕಾರರು ನಾವು ಕೂಡ ಅಮರಣಾಂತರ ಉಪವಾಸದಲ್ಲಿ ಭಾಗವಹಿಸುತ್ತೇವೆ ಎಂದು ವೇದಿಕೆಯಲ್ಲಿ ಘೋಷಿಸಿದರು,ನಟ ಹಾಗೂ ಹೋರಾಟಗಾರ ಚೇತನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಟಿಪ್ಪು ಹೆಸರನ್ನ ಮತ ಬ್ಯಾಂಕ್ ರೀತಿ ಬಳಸಿಕೊಳ್ಳುವುದಕ್ಕೆ ಈ ಘಟನೆ ಪ್ರಮುಖ ಕಾರಣವಾಗಿದೆ. ಒಂದು ಸಮುದಾಯದವರನ್ನು ಓಲೈಸುವುದಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗುವ ಸಿದ್ದರಾಮಯ್ಯನ ಸರ್ಕಾರ ಟಿಪ್ಪು ಅಭಿವೃದ್ಧಿ ಪಡಿಸಿದ ಕುಣಿಗಲ್ ಸ್ಟಡ್ ಫಾರಂ ಅನ್ನು ನಾಶ ಮಾಡಿ ತಮಗೆ ಬೇಕಾದ ಬಂಡವಾಳ ಶಾಹಿಗಳು ಗುತ್ತಿಗೆದಾರರು ಸೇರಿದಂತೆ ಶ್ರೀಮಂತ ವರ್ಗದವರಿಗೆ ಕಾಂಕ್ರೀಟ್ ಕಾಡು ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೋರಾಟಕ್ಕೆ ನಾನು ಸದಾ ಇದ್ದೇನೆ. ಇದು ಕೇವಲ ಕುಣಿಗಲ್ ಹೋರಾಟವಲ್ಲ, ಕರ್ನಾಟಕ ರಾಜ್ಯಾದ್ಯಂತ ಇದಕ್ಕೆ ಹೋರಾಟದ ಕಿಚ್ಚು ಹಚ್ಚಬೇಕಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಈ ಯೋಜನೆಯನ್ನು ಕೈಬಿಡಬೇಕೆಂದರು.ನಟ ಹಾಗೂ ಆಪ್ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಭ್ರಷ್ಟ ಸರ್ಕಾರ ಇಂದಿನ ಗುತ್ತಿಗೆದಾರ ಸರಿಯಾದ ಕಮಿಷನ್ ನೀಡಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಕೊಡಬೇಕಾದ ಟೆಂಡರ್ ಅನ್ನು ರದ್ದು ಮಾಡಿ ಇದೀಗ ರಿಯಲ್ ಎಸ್ಟೇಟ್ ಹುಳಗಳಿಗೆ ಹಾಗೂ ಬಿಲ್ಡರ್‌ಗಳಿಗೆ ಆ ಸ್ಥಳವನ್ನು ಟೌನ್ ಶಿಪ್ ಹೆಸರಿನಲ್ಲಿ ಮಾರಾಟ ಮಾಡಲು ಮುಂದಾಗಿದೆ. ಈ ವಿಚಾರವನ್ನು ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು,
ಈ ಸಂದರ್ಭದಲ್ಲಿ ಇತಿಹಾಸ ತಜ್ಞರಾದ ತಲಕಾಡು ಚಿಕ್ಕರಂಗೇಗೌಡ, ಧರ್ಮೇಂದ್ರ ಕುಮಾರ್, ಜ್ಞಾನ, ಮಧು, ಹರೀಶ್, ವಿಜಯ್, ಪ್ರಶಾಂತ್, ಪ್ರಕಾಶ್ ಕುಣಿಗಲ್ ಸೇರಿದಂತೆ ಹಲವಾರು ಹೋರಾಟಗಾರರು ಹಾಗೂ ಬಿಜೆಪಿ ಮುಖಂಡ ರಾಜೇಶ್ ಗೌಡ, ವೈ.ಎಚ್. ಹುಚ್ಚಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ್, ಜೆಡಿಎಸ್ ಮುಖಂಡ ಜಗದೀಶ್ ಡಿ. ನಾಗರಾಜಯ್ಯ, ತರೀಕೆರೆ ಪ್ರಕಾಶ್, ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ, ಆಪ್ ಪಕ್ಷದ ಮುಖಂಡ ಜೈರಾಮಯ್ಯ, ವಕೀಲರ ಸಂಘದ ಅಧ್ಯಕ್ಷ ಬಾಬು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿ ಪಾಳ್ಯ ರಮೇಶ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಶಾಂತಕುಮಾರಿ ಸೇರಿದಂತೆ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಅಧ್ಯಕ್ಷರು ಹಲವಾರು ಸಮಾಜದ ಕೋಮಿನ ಮುಖಂಡರುಗಳು ಭಾಗವಹಿಸಿದ್ದರು.