ರಂಜಾನ್ ಹಬ್ಬದ ಉಪವಾಸದ ತಿಂಗಳಿನಲ್ಲಿ ದೇವರ ಕೃಪೆಗೆ ಪಾತ್ರರಾಗಲು ಉಪವಾಸ ಆಚರಣೆ ಶ್ರೇಷ್ಠವಾಗಿದೆ. ಅಂತಹ ವ್ರತಗಳನ್ನು ಮಾಡುವ ಈ ತಿಂಗಳು ಪವಿತ್ರವಾಗಿದೆ ಎಂದು ಶ್ರೀ ಹಾಲಸ್ವಾಮಿ ವಿರಕ್ತ ಮಠದ ಡಾ. ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ನುಡಿದಿದ್ದಾರೆ.
- ಸೌಹಾರ್ದ ಇಫ್ತಿಯಾರ್ ಭೋಜನ ಕೂಟದ ಸಭೆಯಲ್ಲಿ ಡಾ. ಶ್ರೀ ಬಸವ ಜಯಚಂದ್ರ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ರಂಜಾನ್ ಹಬ್ಬದ ಉಪವಾಸದ ತಿಂಗಳಿನಲ್ಲಿ ದೇವರ ಕೃಪೆಗೆ ಪಾತ್ರರಾಗಲು ಉಪವಾಸ ಆಚರಣೆ ಶ್ರೇಷ್ಠವಾಗಿದೆ. ಅಂತಹ ವ್ರತಗಳನ್ನು ಮಾಡುವ ಈ ತಿಂಗಳು ಪವಿತ್ರವಾಗಿದೆ ಎಂದು ಶ್ರೀ ಹಾಲಸ್ವಾಮಿ ವಿರಕ್ತ ಮಠದ ಡಾ. ಶ್ರೀ ಬಸವ ಜಯಚಂದ್ರ ಮಹಾಸ್ವಾಮೀಜಿ ನುಡಿದರು.ಭಾನುವಾರ ಸಂಜೆ ಇಲ್ಲಿನ ಶ್ರೀ ಹಾಲಸ್ವಾಮಿ ಸಮುದಾಯ ಭವನದಲ್ಲಿ ರಂಜಾನ್ ತಿಂಗಳ ಉಪವಾಸ ವ್ರತವನ್ನು ನಡೆಸುತ್ತಿರುವ ಪಟ್ಟಣದ ಮುಸ್ಲಿಂ ಧರ್ಮದ ಜನತೆಗೆ ಏರ್ಪಡಿಸಿದ್ದ ಸೌಹಾರ್ದಯುತ ಇಫ್ತಿಯಾರ್ ಭೋಜನ ಕೂಟದ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಶ್ರೀಗಳು ಜಾತಿ, ಧರ್ಮಗಳು ಯಾವುದೇ ಇರಲಿ ಧರ್ಮಗಳನ್ನು ಗೌರವಿಸುತ್ತ ಸೌಹಾರ್ದದಿಂದ ಜೀವಿಸುತ್ತಿದ್ದಾಗ ಮನಸ್ಸಿಗೆ ಶಾಂತಿ- ಸಮಾಧಾನಗಳು ದೊರೆತು ನೆಮ್ಮದಿಯ ಜೀವನ ನಮ್ಮದಾಗುವುದು ಎಂದರು.
ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂತಹ ಸೌಹಾರ್ದ ಭೋಜನಕೂಟಗಳಿಂದ ಜನರ ಮಧ್ಯೆ ಸಾಮರಸ್ಯ ಮೂಡುತ್ತದೆ. ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದರು.ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅಮಾನುಲ್ಲಾ ಮಾತನಾಡಿ, ಈ ಹಿಂದಿನ ಹಲವಾರು ವರ್ಷಗಳಿಂದ ಶ್ರೀ ಮಠದ ವತಿಯಿಂದ ಪವಿತ್ರ ರಂಜಾನ್ ತಿಂಗಳಿನಲ್ಲಿ ಇಫ್ತಿಯಾರ್ ಕೂಟಗಳನ್ನು ನಡೆಸುತ್ತಿರುವ ಬಗ್ಗೆ ಶ್ಲಾಘಿಸಿದರು.
ಇಫ್ತಿಯಾರ್ ಕೂಟದಲ್ಲಿ ಪಟ್ಟಣದಲ್ಲಿನ ಎಲ್ಲ ಮಸೀದಿಗಳ ಅಧ್ಯಕ್ಷರು ಮತ್ತು ಮುಸ್ಲಿಂ ಧರ್ಮದ ಜನರಿಗೆ ವಿರಕ್ತ ಮಠದ ಮತ್ತು ಹಿರೇಮಠದ ಉಭಯ ಶ್ರೀಗಳು ಭೋಜನವನ್ನು ಉಣಬಡಿಸಿದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮಾಜ ವತಿಯಿಂದ ಉಭಯ ಶ್ರೀಗಳನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ಖುದ್ದೂಸ್, ಸರ್ದಾರ್, ಫಾಜೀಲ್, ಸೈಯದ್ ಗೌಸ್ ಪೀರ್, ಬದ್ರುದ್ದೀನ್, ಸೈಯದ್ ತನ್ವೀರ್, ಜಬೀಉಲ್ಲಾ, ಅಸ್ಸರ್, ವೀರಶೈವ ಸಮಾಜದ ಗೌರವ ಅಧ್ಯಕ್ಷ ರಾಜಶೇಖರಯ್ಯ, ಎಚ್.ಬಿ. ರುದ್ರಯ್ಯ, ಜವಳಿ ಮಹೇಶ್, ಚಂದ್ರಯ್ಯ, ಸಾಗರದ ಶಿವಲಿಂಗಪ್ಪ ಮೊದಲಾದವರು ಹಾಜರಿದ್ದರು.
- - --9ಕೆಸಿಎನ್ಜಿ1: ಮುಸ್ಲಿಂ ಸಮಾಜದಿಂದ ಉಭಯ ಶ್ರೀಗಳನ್ನು ಗೌರವಿಸಲಾಯಿತು.
-9ಕೆಸಿಎನ್ಜಿ2: ಮುಸ್ಲಿಂ ಸಮುದಾಯದ ಜನರಿಗೆ ಉಭಯ ಶ್ರೀಗಳು ಭೋಜನ ಉಣಬಡಿಸಿದರು.