ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗ್ರಾಪಂ ಅಧ್ಯಕ್ಷ ಹಾಗೂ ಆತನ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ದೇಮಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗ್ರಾಪಂ ಅಧ್ಯಕ್ಷ ಹಾಗೂ ಆತನ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ದೇಮಟ್ಟಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಉಗರಖೋಡ ಗ್ರಾಪಂ ಅಧ್ಯಕ್ಷ ಶಫೀಕ ಹವಾಲ್ದಾರ್ ಹಲ್ಲೆ ನಡೆಸಿರುವ ಆರೋಪಿ. ದೇಮಟ್ಟಿಯ ಗ್ರಾಪಂ ಸದಸ್ಯ ಲಿಂಗರಾಜ ಅಂಬಡಗಟ್ಟಿ ಹಲ್ಲೆಗೆ ಒಳಗಾಗಿ ಗಂಭೀರ ಗಾಯಗೊಂಡಿರುವ ವ್ಯಕ್ತಿ. ಗಾಯಾಳು ಲಿಂಗರಾಜಗೆ ಕಿತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕಿಚಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಲಿಂಗರಾಜ್ ಸೇರಿದಂತೆ ಸಹೋದರ ಮಲ್ಲೇಶ ಅಂಬಡಗಟ್ಟಿ ಹಾಗೂ ರವಿ ತಿಪ್ಪಣ್ಣವರ ಎಂಬುವರ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಶನಿವಾರ ರಾತ್ರಿ ಗ್ರಾಮದ ಅಗಸಿಯಲ್ಲಿ ನಿಂತಿದ್ದ ವೇಳೆ ಶಫೀಕ ಹವಾಲ್ದಾರ್ ಹಾಗೂ ಆತನ ಬೆಂಬಲಿಗರು ಚಾಕು, ರಾಡ್, ಬಾಟಲಿ ಹಾಗೂ ದೊಣ್ಣೆಗಳಿಂದ ಏಕಾಏಕಿ ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದಾಗ ಗ್ರಾಮದ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ಆರೋಪಿಗಳು ಹೀನ ಕೃತ್ಯ ಎಸಗಿದ್ದಾರೆ. ಅಲ್ಲದೇ, ಜೀವ ಬೆದರಿಕೆ ಕೂಡ ಹಾಕಿದ್ದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ನಿಂಗರಾಜ ಆರೋಪಿಸಿದ್ದಾರೆ.
ಶಫೀಕ ಹವಾಲ್ದಾರ, ಇಸಾಕ ಹವಾಲ್ದಾರ, ಆತೀಪ ಹವಾಲ್ದಾರ, ಅರಾನ ಹವಾಲ್ದಾರ, ಸೂಪಿಯಾನ್ ಹವಾಲ್ದಾರ, ಮೂಬಸರ ಹವಾಲ್ದಾರ, ಸೈಪಅಲಿ ಹವಾಲ್ದಾರ, ದಾನಿಶ್ ಕಲಬುರ್ಗಿ, ಅಷ್ಪಾಕ ಹವಾಲ್ದಾರ ಸೇರಿದಂತೆ ಒಟ್ಟು 25 ಜನರ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಸಕರು, ಮಾಜಿ ಶಾಸಕರ ಭೇಟಿ:
ಕಿತ್ತೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಬಾಬಾಸಾಹೇಬ ಪಾಟೀಲ ಲಿಂಗರಾಜ್ ಆರೋಗ್ಯ ವಿಚಾರಿಸಿದರು. ಇದೆ ವೇಳೆ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು. ಅಲ್ಲದೇ, ಮಾಜಿ ಶಾಸಕ ಮಹಾಂತೇಶ ದೊಡಗೌಡರ ಕೂಡ ಆರೋಗ್ಯ ವಿಚಾರಿಸಿದ್ದು, ರಾಜ್ಯದಲ್ಲಿನ ಹಿಂದುಗಳ ಮೇಲೆ ನಡೆದಂತೆಯೇ ದೇಮಟ್ಟಿ ಗ್ರಾಮದಲ್ಲಿ ಹಲ್ಲೆ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಅದೇ ಪಕ್ಷದ ಗ್ರಾಪಂ ಅಧ್ಯಕ್ಷ ಹಲ್ಲೆ ಮಾಡಿದ್ದಾನೆ. ಹಿಂದುಗಳಿಗೆ ಭದ್ರತೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.------------