ಮಕ್ಕಳಿಗೆ ಜೀವನದಲ್ಲಿ ತಂದೆ, ತಾಯಿಯೇ ಆದರ್ಶವಾಗಬೇಕು

| Published : Feb 29 2024, 02:03 AM IST / Updated: Feb 29 2024, 02:04 AM IST

ಸಾರಾಂಶ

ಮಕ್ಕಳ ಮನಸ್ಸು ಹೂವಿನಷ್ಟೇ ನವಿರು. ಹಾಗಾಗಿ ಅವರಿಗೆ ಸಲಹೆ ನೀಡುವ ಬದಲು ನಮ್ಮ ನಡೆ, ನುಡಿ ಶುದ್ಧವಾಗಿದ್ದರೆ ಅವರ ಹಾದಿಯೂ ಸರಿಯಾಗಿರುತ್ತದೆ. ಏಕೆಂದರೆ ನಮ್ಮನ್ನು ಗಮನಿಸುವ ಮಕ್ಕಳು, ನಮ್ಮನ್ನೇ ಅನುಕರಿಸುತ್ತವೆ ಎಂದು ಸೊರಬ ತಾಲೂಕು ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಮಕ್ಕಳ ಮನಸ್ಸು ಹೂವಿನಷ್ಟೇ ನವಿರು. ಹಾಗಾಗಿ ಅವರಿಗೆ ಸಲಹೆ ನೀಡುವ ಬದಲು ನಮ್ಮ ನಡೆ, ನುಡಿ ಶುದ್ಧವಾಗಿದ್ದರೆ ಅವರ ಹಾದಿಯೂ ಸರಿಯಾಗಿರುತ್ತದೆ. ಏಕೆಂದರೆ ನಮ್ಮನ್ನು ಗಮನಿಸುವ ಮಕ್ಕಳು, ನಮ್ಮನ್ನೇ ಅನುಕರಿಸುತ್ತವೆ ಎಂದು ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ಮಂಗಳವಾರ ತಾಲೂಕಿನ ದ್ವಾರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಸಿನಿಮಾ ನಟ-ನಟಿಯರನ್ನು ಬದುಕಿನಲ್ಲಿ ಆದರ್ಶವಾಗಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದು ಅತ್ಯಂತ ಖೇದಕರ ಸಂಗತಿ. ಹೆತ್ತು ಹೊತ್ತ, ಲಾಲಿಸಿ, ಪೋಷಿಸುವ ತಂದೆ-ತಾಯಿಯನ್ನು ಆದರ್ಶವಾಗಿಟ್ಟುಕೊಳ್ಳುವ ಗುಣ ಮೊದಲು ಬೆಳೆಸಿಕೊಳ್ಳಬೇಕು. ಆದರ್ಶದ ಹಾದಿಯಲ್ಲಿ ಪೋಷಕರು ಸಹ ನಡೆದಾಗ ಅವರು ಮನೆಗಷ್ಟೇ ಅಲ್ಲ, ಜಗತ್ತಿಗೂ ಮಾದರಿ ಆಗುತ್ತಾರೆ. ಇದನ್ನು ಸರ್ವರೂ ಚಿಂತಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ಸಂಪತ್ತನ್ನು ಕೊಡುವುದಕ್ಕಿಂತಲೂ ಪೂರ್ವದಲ್ಲಿ ಸಂಸ್ಕಾರವನ್ನು ಕೊಡಬೇಕು. ಸಂಸ್ಕಾರವಿದ್ದ ವ್ಯಕ್ತಿ ಸಂಪತ್ತನ್ನು ಸದುಪಯೋಗ ಮಾಡುತ್ತಾನೆ. ಸಂಸ್ಕಾರ ಇಲ್ಲದ ವ್ಯಕ್ತಿ ಸಂಪತ್ತಿನೊಂದಿಗೆ ತನ್ನನ್ನೂ ಕಳೆದುಕೊಳ್ಳುತ್ತಾನೆ. ಜಗತ್ತಿನಲ್ಲಿ ಸಂಸ್ಕಾರವಿರದ ವ್ಯಕ್ತಿಗೆ ಯಾವ ಗೌರವವೂ ಸಿಗುವುದಿಲ್ಲ. ಯಾವ ವ್ಯಕ್ತಿಗಳು ಗೌರವಿಸುವುದಿಲ್ಲ. ಅವರಿಂದ ಮನೆಯ ನೆಮ್ಮದಿ ಹಾಳಾಗುವುದಲ್ಲದೇ ಊರಿನ ನೆಮ್ಮದಿಯೂ ಹಾಳಾಗುತ್ತದೆ. ಸಂಸ್ಕಾರವಿರದ ವ್ಯಕ್ತಿ ಸಾರವಿರದ ಸಂಸಾರದಂತೆ ಎಂಬುದು ಅನುಭವಿಕರ ಮಾತು ಎಂದರು.

ಇಂದು ಪ್ರತಿ ಗ್ರಾಮಗಳ ಗಲ್ಲಿ, ಬೀದಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯೂ ಅಲ್ಲ, ಸಂಸ್ಕೃತಿಯೂ ಅಲ್ಲ. ಎಲ್ಲರೂ ಇದರ ಬಗ್ಗೆ ಎಚ್ಚರಗೊಳ್ಳಬೇಕು. ಗ್ರಾಮದ ನಾರಿಶಕ್ತಿಯೂ ಜಾಗೃತಗೊಂಡು ಇದಕ್ಕೊಂದು ತಡೆ ನೀಡುವ ಪ್ರಯತ್ನ ಮಾಡಬೇಕು. ನಾರಿಶಕ್ತಿಯ ಮುಂದೆ ಸರ್ವಶಕ್ತಿಯೂ ಅಶಕ್ತವಾಗುತ್ತದೆ. ಇದರ ಬಗ್ಗೆ ಎಲ್ಲರೂ ಚಿಂತಿಸಿ ಗ್ರಾಮವನ್ನು ಆದರ್ಶ ಗ್ರಾಮವಾಗಿಸಬೇಕು ಎಂದು ಹೇಳಿದರು.

ಹಿರೇಮಾಗಡಿ ಸಂಸ್ಥಾನದ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿ ಮಾತನಾಡಿ, ಪ್ರತಿವರ್ಷ ಗ್ರಾಮಸ್ಥರೆಲ್ಲರೂ ಇಂತಹ ಉತ್ತಮ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಉತ್ತಮ ವಾತಾವರಣ, ಸಂಸ್ಕಾರ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಗ್ರಾಮಸ್ಥರು, ಶಾಲಾ ಸಮಿತಿ ಸರ್ವ ಸದಸ್ಯರೂ ಹಾಜರಿದ್ದರು. ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನೆರವೇರಿದವು. ದಾನಿಗಳನ್ನು ಸನ್ಮಾನಿಸಲಾಯಿತು.

- - - -೨೮ಕೆಪಿಸೊರಬ೦೨:

ಸೊರಬ ತಾಲೂಕಿನ ದ್ವಾರಹಳ್ಳಿ ಗ್ರಾಮದಲ್ಲಿ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.