ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣಕ್ಕೆ ಹೊಂದಿಕೊಂಡಂತಿರುವ (ಗುಂಡ್ಲುಪೇಟೆ -ಕೇರಳ ಹೆದ್ದಾರಿ) ಖಾಸಗಿ ಲೇ ಔಟ್ ಮುಂದಿನ ನೆಡು ತೋಪಿನ 20 ಕ್ಕೂ ಹೆಚ್ಚು ಮರ ಕಡಿದ ಪ್ರಕರಣದಲ್ಲಿ ಕೇಸು ದಾಖಲಿಸಲು ಗುಂಡ್ಲುಪೇಟೆ ಬಫರ್ ಜೋನ್ ವಲಯ ಮೀನಾ ಮೇಷ ಎಣಿಸುತ್ತಿದೆಯೇ? ಕಳೆದ ಮೂರು ತಿಂಗಳ ಹಿಂದೆ ನೆಡು ತೋಪಿನಲ್ಲಿದ್ದ 20 ಕ್ಕೂ ಹೆಚ್ಚು ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆಯದೇ ಲೇ ಔಟ್ ಮಾಲೀಕರು ಕಡಿದು ಹಾಕಿದ್ದು, ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಅಕ್ರಮವಾಗಿ ನೆಡು ತೋಪಿನ ಮರ ಕಡಿದ ಲೇ ಔಟ್ ಮಾಲೀಕರ ಮೇಲೆ ಕೇಸು ದಾಖಲಿಸಿ ಎಂದು ಎಸಿಎಫ್ ಜಿ ರವೀಂದ್ರ ಆರ್‌ಎಫ್‌ಒ ಮಂಜುನಾಥ್‌ಗೆ ಮೂರು ಬಾರಿ ನೋಟೀಸ್ ನೀಡಿದ್ದರೂ ಕೇಸು ದಾಖಲಿಸಿಲ್ಲ. ಖಾಸಗಿ ಲೇ ಔಟ್ ಮಾಲೀಕರೊಂದಿಗೆ ಆರ್‌ಎಫ್‌ಒ ಶಾಮೀಲಾಗಿರುವುದೇ ಕೇಸು ದಾಖಲಿಸಲು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಪಟ್ಟಣದ ನಿವಾಸಿ ರಾಜು ಆರೋಪಿಸಿದ್ದಾರೆ.ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೆಡು ತೋಪಿನ ಮರ ಕಡಿತ ಪ್ರಕರಣದಲ್ಲಿ ಲೇ ಔಟ್ ಮಾಲೀಕರ ಮೇಲೆ ಕೇಸು ದಾಖಲಿಸದೆ ಕಳೆದ ಮೂರು ತಿಂಗಳಿನಿಂದಲೂ ಮೀನಾ ಮೇಷ ಎಣಿಸುತ್ತಿರುವುದು ಗಮನಿಸಿದರೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಯ ಸಹಕಾರ ಇದೆಯಾ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಎದ್ದಿದೆ.ಗುಂಡ್ಲುಪೇಟೆ ಬಳಿಯ ಖಾಸಗಿ ಲೇ ಔಟ್‌ನ ಮುಂದೆ ಇದ್ದ ನೆಡುತೋಪಿನ ಮರ ಕಡಿದ ಪ್ರಕರಣದಲ್ಲಿ ಕೇಸು ದಾಖಲಿಸಿ ಎಂದು ಆರ್‌ಎಫ್‌ಒ ಮಂಜುನಾಥ್‌ಗೆ ಹೇಳಿದ್ದೇನೆ. ಅಲ್ಲದೆ ಮೂರು ನೋಟೀಸ್ ಕೂಡ ನೀಡಲಾಗಿದೆ. ಈ ಸಂಬಂಧ ಅರಣ್ಯ ಸಂರಕ್ಷಣಾಧಿಕಾರಿಗಳ ಗಮನಕ್ಕೆ ಮತ್ತೆ ತರುತ್ತೇನೆ.ಜಿ.ರವೀಂದ್ರ, ಎಸಿಎಫ್, ಗುಂಡ್ಲುಪೇಟೆ ಉಪ ವಿಭಾಗ