ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಇಲ್ಲಿನ ಸಂತ ಜೋಸೆಫರ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಸಾಧನೆಗೆ ಕಾರಣಕರ್ತರಾದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.ಸಮಾರಂಭ ಉದ್ಘಾಟಿಸಿದ ಪ್ರಾನ್ಸಿಸ್ ಕ್ಸೇವಿಯರ್ಸ್ ಚರ್ಚ್‌ನ ಫಾದರ್ ಜಾರ್ಜ್ ಮಾರ್ಟೀಸ್ ಮಾತನಾಡಿ, ವಿದ್ಯಾರ್ಥಿಗಳು ಸದಾ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿಗಳ ಈ ವಯೋಮಾನ ಅತ್ಯಂತ ಗೊಂದಲ ಮತ್ತು ಸಂಕೀರ್ಣತೆಯಿಂದ ಕೂಡಿದ ಮನಸ್ಥಿತಿ ಹೊಂದಿದೆ. ಆಧುನಿಕ ಜೀವನಶೈಲಿ, ಸಾಮಾಜಿಕ ಜಾಲತಾಣಗಳ ಬಳಕೆ ವಿದ್ಯಾರ್ಥಿಗಳನ್ನು ಅಡ್ಡದಾರಿಗೆ ಕೊಂಡೊಯ್ಯುವ ಸಾಧ್ಯತೆ ಹೆಚ್ಚಾಗಿದ್ದು, ವಿಚಲಿತರಾಗದೇ ಸಾಧನೆಯ ಹಾದಿಯಲ್ಲಿ ದೃಢ ಹೆಜ್ಜೆ ಇಡಿ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, ವಿದ್ಯಾರ್ಥಿಗಳೂ ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವುದನ್ನು ಕಾಣುವುದೇ ಶಿಕ್ಷಕರಾದ ನಮ್ಮೆಲ್ಲರ ಕನಸಾಗಿರುತ್ತದೆ ಎಂದರು.ಕಳೆದ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿಹೆಚ್ಚು ಅಂದರೆ 590 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನಪಡೆದ ವಿದ್ಯಾರ್ಥಿನಿ ಚಂದನಾ ಲೋಕೇಶ್, ವಾಣಿಜ್ಯ ವಿಭಾಗದಲ್ಲಿ 581 ಅಂಕಗಳಿಸಿದ ಮೊಮ್ಮಿನ ಮಹಮ್ಮದಿ, ಕಲಾ ವಿಭಾಗದಲ್ಲಿ 579 ಅಂಕ ಗಳಿಸಿದ ದಿವ್ಯಾ ಮತ್ತವರ ಪಾಲಕರು ಹಾಗು ವಿವಿಧ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. 2003-04ರ ಕಾಲೇಜಿನ ಮೊದಲ ಬ್ಯಾಚ್‌ನ ಅತಿಹೆಚ್ಚು ಅಂಕಗಳಿಸಿದ ಹಳೆಯ ವಿದ್ಯಾರ್ಥಿಗಳನ್ನು ಕರೆಯಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಿರಿಯ ವಿದ್ಯಾರ್ಥಿಗಳಾದ ಶೃತಿ, ಸ್ವಾಮಿ, ಚೇತನ್, ಅಧ್ಯಾಪರು ಮತ್ತು ವಿದ್ಯಾರ್ಥಿಗಳು ಇದ್ದರು.