ಸಾರಾಂಶ
ಆನ್‌ಲೈನ್ ಗೇಮ್ ವ್ಯಸನಕ್ಕೆ ಬಿದ್ದು ಹಣಕ್ಕಾಗಿ ಕಾಡುತ್ತಿದ್ದ ತನ್ನ ತಂಗಿಯ 14 ವರ್ಷದ ಮಗನನ್ನು ಸೋದರ ಮಾವ ಕೊಂ* ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ನಗರ ಹೊರವಲಯದಲ್ಲಿ ನಡೆದಿದೆ.
ಬೆಂಗಳೂರು : ಆನ್‌ಲೈನ್ ಗೇಮ್ ವ್ಯಸನಕ್ಕೆ ಬಿದ್ದು ಹಣಕ್ಕಾಗಿ ಕಾಡುತ್ತಿದ್ದ ತನ್ನ ತಂಗಿಯ 14 ವರ್ಷದ ಮಗನನ್ನು ಸೋದರ ಮಾವ ಕೊಂ* ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ನಗರ ಹೊರವಲಯದಲ್ಲಿ ನಡೆದಿದೆ.
ಕುಂಬಾರಹಳ್ಳಿ ನಿವಾಸಿ ನಾಗಪ್ರಸಾದ್ ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ತನ್ನ ತಂಗಿ ಶಿಲ್ಪಾ ಅವರ ಪುತ್ರ ಅಮೋಘನನ್ನು ಚಾಕುವಿನಿಂದ ಇರಿದು ಕೊಂದು, ಬಳಿಕ ಆತ ಪೊಲೀಸರಿಗೆ ಶರಣಾಗಿದ್ದಾನೆ. ಆನ್‌ಲೈನ್ ಗೇಮ್ ಆಡಲು ಪದೇ ಪದೇ ಹಣ ಕೇಳುತ್ತಿದ್ದ. ಆಗಾಗಿ ಅಮೋಘನನ್ನು ಹತ್ಯೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ನಾಗಪ್ರಸಾದ್ ಅವಿವಾಹಿತನಾಗಿದ್ದು, ತನ್ನ ತಂಗಿ ಮಗನ ಜತೆ ನೆಲೆಸಿದ್ದ. ಕುಂಬಾರಹಳ್ಳಿ ಸಮೀಪದ ಶಾಲೆಯಲ್ಲಿ ಆತ ಏಳನೇ ತರಗತಿ ಓದುತ್ತಿದ್ದ. ಆದರೆ ಅದೇ ಊರಿನಲ್ಲಿ ನಾಗಪ್ರಸಾದ್ ಅವರ ತಾಯಿ ಹಾಗೂ ತಂಗಿ ಪ್ರತ್ಯೇಕವಾಗಿ ವಾಸವಾಗಿದ್ದರು.
ಇತ್ತೀಚೆಗೆ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ನ ಗೀಳಿಗೆ ಅಮೋಘ್ ಬಿದ್ದಿದ್ದ. ಈ ವ್ಯಸನ ತಪ್ಪಿಸಲು ಸೋದರಳಿಯನಿಗೆ ಅವರು ಬುದ್ಧಿ ಮಾತು ಹೇಳಿದರು. ಆದರೆ ಬಾಲಕ ಮಾತ್ರ ನಿರಂತರವಾಗಿ ಆಟವಾಡುತ್ತಲೇ ಮುಂದುವರಿದಿದ್ದ. ಇದಕ್ಕಾಗಿ ಹಣ ನೀಡುವಂತೆ ತಾಯಿ ಹಾಗೂ ಸೋದರ ಮಾವನನ್ನು ಆತ ಪೀಡಿಸುತ್ತಿದ್ದ. ಈತನ ಹಠಕ್ಕೆ ಮಣಿದು ಹಲವು ಬಾರಿ ಅವರು ಹಣ ಸಹ ಕೊಟ್ಟಿದ್ದರು. ಆದರೆ ಪದೇ ಪದೇ ಹಣಕ್ಕೆ ಕಾಡುತ್ತಿದ್ದು ಜಗಳ ಶುರುವಾಗಿತ್ತು. ಇದೇ ವಿಷಯವಾಗಿ ಮನೆಯಲ್ಲಿ ಅಮೋಘನಿಗೆ ಹೊಡೆದು ಬಡಿದು ಅವರು ಬುದ್ಧಿ ಹೇಳಲು ಯತ್ನಿಸಿ ವಿಫಲರಾಗಿದ್ದರು.
ಅಂತೆಯೇ ಸೋಮವಾರ ಸಹ ಆನ್‌ಲೈನ್ ಗೇಮ್‌ಗೆ ಹಣಕ್ಕೆ ಅಮೋಘ ಕೇಳಿದ್ದಾನೆ. ಆಗ ಸಿಟ್ಟಿಗೆದ್ದ ನಾಗಪ್ರಸಾದ್, ಮನೆಯಲ್ಲಿ ಅಮೋಘನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಇರಿದು ಕೊಂದಿದ್ದಾನೆ. ಈ ಹತ್ಯೆ ಬಳಿಕ ಸೋಲದೇವನಹಳ್ಳಿ ಠಾಣೆಗೆ ತೆರಳಿ ಆತ ಸ್ವಯಂ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.