ಸಾರಾಂಶ
ಹೆಮ್ಮಾಡಿ ಕುಂಬ್ರಿಯಲ್ಲಿ ಮಗಳನ್ನೇ ಕೊಲೆ ಮಾಡಿದ್ದ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಪ್ರಕಟಿಸಿದೆ.
ಯಲ್ಲಾಪುರ: ತಾಲೂಕಿನ ಹೆಮ್ಮಾಡಿ ಕುಂಬ್ರಿಯಲ್ಲಿ ಮಗಳನ್ನೇ ಕೊಲೆ ಮಾಡಿದ್ದ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಆದೇಶ ಪ್ರಕಟಿಸಿದೆ.
ಹೆಮ್ಮಾಡಿ ಕುಂಬ್ರಿಯ ನಾಗರಾಜ ನಾರಾಯಣ ಪೂಜಾರಿ 2019ರಲ್ಲಿ ತನ್ನ ಮಗಳಾದ ನಯನಾಳನ್ನು (11) ಕೊಲೆ ಮಾಡಿದ್ದ. ಈತ ತನಗೆ ಮೂವರೂ ಹೆಣ್ಣುಮಕ್ಕಳೇ ಜನಿಸಿದ್ದು, ತನ್ನ ವಂಶ ಮುಂದೆ ಬೆಳೆಯುವುದಿಲ್ಲ ಎಂಬ ಕೊರಗಿನಲ್ಲಿ ದಿನವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಮಗಳಾದ ನಯನಾಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಚಿಕಿತ್ಸೆಗಾಗಿ ಹಣ ಖರ್ಚಾದ ಬಗ್ಗೆಯೂ ಈತನಿಗೆ ಅಸಮಾಧಾನವಿತ್ತು. ಪ್ರತಿನಿತ್ಯ ಗಂಡನ ಗಲಾಟೆಯಿಂದ ಬೇಸತ್ತ ಪತ್ನಿ ಮಕ್ಕಳನ್ನೂ ಅವನೊಂದಿಗೇ ಬಿಟ್ಟು ಹೋಗಿದ್ದಳು. ಮಕ್ಕಳು ತಾಯಿ ಬೇಕೆಂದು ಹಠ ಮಾಡಿದ ಸಂದರ್ಭದಲ್ಲಿ ಸಿಟ್ಟಾದ ನಾಗರಾಜ, ಮಗಳ ಮೇಲೆ ಹಲ್ಲೆ ಮಾಡಿಯೋ ಅಥವಾ ಕ್ರಿಮಿನಾಶಕ ಕುಡಿಸಿಯೋ ಕೊಲೆ ಮಾಡಿದ್ದ. ಕಾರವಾರದ ಮಹಿಳಾ ಸಂಘದವರು ಮತ್ತೊಬ್ಬ ಮಗಳು ಸಹನಾಳ ಕೌನ್ಸೆಲಿಂಗ್ ಮಾಡಿದಾಗ ಈ ವಿಚಾರ ತಿಳಿದು ಬಂದಿತ್ತು.ಸಂಬಂಧಿಕರ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ್ದ ಯಲ್ಲಾಪುರ ಸಿಪಿಐ ಡಾ.ಮಂಜುನಾಥ ನಾಯಕ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಒಂದನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹17 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪುತ್ರಿ ಸಹನಾಗೆ 10 ಸಾವಿರ ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರದಿಂದಲೂ ಸಹನಾ ಪರಿಹಾರ ಪಡೆಯಬಹುದೆಂದು ತೀರ್ಪು ನೀಡಿದ್ದಾರೆ. ಪ್ರಧಾನ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಸರ್ಕಾರದ ಪರ ವಾದ ಮಂಡಿಸಿದ್ದರು. ಯಲ್ಲಾಪುರ ಹಾಲಿ ಸಿಪಿಐ ರಮೇಶ ಹಾನಾಪುರ ಕೋರ್ಟ್ ಮಾನಿಟರಿಂಗ್ ಮಾಡಿದ್ದರು.