ಸಾರಾಂಶ
ಗುರುಗ್ರಾಮ: ಹೆಚ್ಚು ರೀಲ್ಸ್ ನೋಡುತ್ತಿದ್ದ ಕಾರಣ, ಹರ್ಯಾಣದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ತಂದೆಯೇ ಗುಂಡಿಟ್ಟು ಹತ್ಯೆಗೈದ ದಾರುಣ ಘಟನೆ ಗುರುವಾರ ನಡೆದಿದೆ. ಗುರುಗ್ರಾಮದ ಸುಶಾಂತ ಲೋಕದಲ್ಲಿರುವ ಮನೆಯಲ್ಲಿ ತಂದೆಯೇ ಮಗಳ ಮೇಲೆ 5ಕ್ಕೂ ಹೆಚ್ಚು ಗುಂಡು ಹಾರಿಸಿದ್ದಾನೆ. ಸ್ಥಳದಲ್ಲೇ ರಾಧಿಕಾ ಮೃತಪಟ್ಟಿದ್ದು, ತಂದೆಯನ್ನು ಬಂಧಿಸಲಾಗಿದೆ.
ಗುಜರಾತ್ ಸೇತುವೆ ಕುಸಿತ: ಸಾವಿನ ಸಂಖ್ಯೆ 16ಕ್ಕೇರಿಕೆ, ಉಳಿದ 4 ಜನರಿಗೆ ಶೋಧ
ವಡೋದರಾ: ಬುಧವಾರ ಸಂಭವಿಸಿದ ಗುಜರಾತ್‌ನ ಗಂಭೀರಾ ಸೇತುವೆ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16ಕ್ಕೇರಿದೆ. ಕುಸಿತದಲ್ಲಿ ಕಣ್ಮರೆಯಾಗಿರುವ 3-4 ಜನರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಸಾಗರ ನದಿಗೆ ಅಡ್ಡಲಾಗಿ ಕಟ್ಟಿದ್ದ ಗಂಭೀರಾ ಸೇತುವೆ ಬುಧವಾರ ಕುಸಿದಿತ್ತು. ಈ ವೇಳೆ ಸೇತುವೆ ಮೇಲಿದ್ದ ವಾಹನಗಳು ನದಿಗೆ ಬಿದ್ದು ದುರ್ಘಟನೆ ಸಂಭವಿಸಿತ್ತು.
ಹೈದ್ರಾಬಾದ್ ಕಳ್ಳಬಟ್ಟಿ ಸೇವನೆ: 4 ಸಾವು, 44 ಜನರು ಅಸ್ವಸ್ಥ, ಆಸ್ಪತ್ರೆಗೆ
ಹೈದರಾಬಾದ್: ಕಳ್ಳಬಟ್ಟಿ ಸೇವವಿ 4 ಜನರು ಮೃತಪಟ್ಟು, 44 ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಹೈದ್ರಾಬಾದ್‌ನಲ್ಲಿ ಸಂಭವಿಸಿದೆ. ಜು.5 ಮತ್ತು ಜು.7ರಂದು ನಗರದ ಕುಕಟ್‌ಪಲ್ಲಿ ಮತ್ತು ಬಾಲಾನಗರ ಸೇರಿ ಹಲವೆಡೆ ಜನರು ಕಳ್ಳಬಟ್ಟಿ ಸೇವಿಸಿದ್ದಾರೆ. ಬಳಿಕ ಜು.8ರಂದು ಅಸ್ವಸ್ಥರಾಗಿ ನಿಜಾಂ ಆಸ್ಪತ್ರೆ ಸೇರಿ ಹಲವೆಡೆ ದಾಖಲಾಗಿದ್ದಾರೆ. ನಾಲ್ವರು ಬಲಿಯಾಗಿದ್ದಾರೆ. 44 ಜನರು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಬಟ್ಟಿ ಅಂಗಡಿಗಳನ್ನು ಅಬಕಾರಿ ಇಲಾಖೆ ಸೀಲ್ ಮಾಡಿದ್ದು, ಐವರನ್ನು ವಶಕ್ಕೆ ಪಡೆದಿದೆ.
ಚೀನಾ, ಪಾಕ್ ಪ್ರಭಾವ ತಗ್ಗಿಸಲು ಮಾಲ್ಡೀವ್ಸ್ ಸ್ವಾತಂತ್ರ್ಯದಿನಕ್ಕೆ ಮೋದಿ
ನವದೆಹಲಿ: ಬಾಂಗ್ಲಾದೇಶ, ಮಾಲ್ಡೀವ್ಸ್ ಸೇರಿದಂತೆ ನೆರೆಹೊರೆಯ ದೇಶ ಬುಟ್ಟಿಗೆ ಹಾಕಿಕೊಂಡು ಭಾರತವನ್ನು ಒಬ್ಬಂಟಿ ಮಾಡಲು ಚೀನಾ ಮತ್ತು ಪಾಕಿಸ್ತಾನ ಸಂಚು ರೂಪಿಸುತ್ತಿರುವ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ. ಜು.26ರಂದು ಮಾಲ್ಡೀವ್ಸ್‌ನ ಸಾತಂತ್ರ್ಯ ದಿನಾಚರಣೆ ಇದ್ದು, ಅದರಲ್ಲಿ ಭಾಗಿಯಾಗುವಂತೆ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಜು ಮೋದಿಯನ್ನು ಆಹ್ವಾನಿಸಿದ್ದಾರೆ. ಈ ಭೇಟಿ ಮಾಲ್ಡೀವ್ಸ್ ಮೇಲಿನ ಪಾಕ್, ಚೀನಾ ಪ್ರಭಾವ ಕಡಿತಕ್ಕೆ ನೆರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೋದಿ ಆಹ್ವಾನ ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ, ಚೀನಾ ಪ್ರಭಾವಕ್ಕೆ ಒಳಗಾಗಿ ಮಾಲ್ಡೀವ್ಸ್ ಭಾರತ ವಿರೋಧಿ ನೀತಿ ಪ್ರದರ್ಶನ ಮಾಡಿತ್ತಾದರೂ, ಭಾರತ ಸರ್ಕಾರ ಅದನ್ನು ಜಾಣತನದಿಂದ ಎದುರಿಸಿತ್ತು.