ಸಾರಾಂಶ
ಬಳ್ಳಾರಿ : ಬಳ್ಳಾರಿ ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ಕೇಂದ್ರದಲ್ಲಿನ (ಬಿಟಿಪಿಎಸ್) 700 ಮೆಗಾ ವ್ಯಾಟ್ ಸಾಮರ್ಥ್ಯದ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ (ಬಾಯ್ಲರ್ ದುರಸ್ತಿ) ಕಳೆದ ಎರಡು ದಿನಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ಬಿಟಿಪಿಎಸ್‌ನಲ್ಲಿ 500 ಮೆ. ವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು, 700 ಮೆ. ವ್ಯಾಟ್ ಸಾಮರ್ಥ್ಯದ ಒಂದು ಘಟಕ ಸೇರಿದಂತೆ ನಿತ್ಯ ಒಟ್ಟು 1,700 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತದೆ. ಕಳೆದ ಮೂರು ದಿನಗಳ ಹಿಂದೆ ಪ್ಲಾಂಟ್‌ನ ಟ್ಯೂಬ್‌ನಲ್ಲಿ ಸೋರಿಕೆ ಕಂಡು ಬಂದಿದ್ದು, ಇದರಿಂದ ವಿದ್ಯುತ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಎರಡು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.
ಬೇಸಿಗೆಯ ದಿನಗಳಲ್ಲಿ ಬಾಯ್ಲರ್‌ನಲ್ಲಿ ತಾಂತ್ರಿಕ ದೋಷ ಕಂಡು ಬರುವುದು ಸಹಜವಾಗಿದ್ದು, ಭಾರೀ ತಾಪಮಾನ ಇರುವ ಜಾಗದಲ್ಲಿ ದುರಸ್ತಿ ಮಾಡಲು ಬರುವುದಿಲ್ಲ. ಹೀಗಾಗಿ ಮೂರು ದಿನ ತಡೆದು, ಉಷ್ಣಾಂಶ ಸಹಜ ಸ್ಥಿತಿಗೆ ಬಂದ ಬಳಿಕ ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ಬಿಟಿಪಿಎಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.