ಹಲವು ವರ್ಷಗಳಿಂದ ಹಳ್ಳಿಕೇರಿ ಪ್ಲೈ ಓವರ್ ಬ್ರಿಡ್ಜ್ ನಿರ್ಮಾಣ ನನೆಗುದಿಗೆ ಬಿದ್ದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಸ್ಥಗಿತವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಧೂಳಿನಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಪ್ರತಿನಿತ್ಯ ಧೂಳಿನಿಂದ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರು

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಹಲವು ವರ್ಷಗಳಿಂದ ಹಳ್ಳಿಕೇರಿ ಪ್ಲೈ ಓವರ್ ಬ್ರಿಡ್ಜ್ ನಿರ್ಮಾಣ ನನೆಗುದಿಗೆ ಬಿದ್ದಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈ ಭಾಗದಲ್ಲಿ ಸ್ಥಗಿತವಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಧೂಳಿನಿಂದ ಪ್ರತಿನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಹುಬ್ಬಳ್ಳಿಯಿಂದ ಗದಗ, ಕೊಪ್ಪಳ ಸೇರಿದಂತೆ ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ನಿರ್ಮಾಣವಾಗಿ ಕೆಲ ವರ್ಷಗಳು ಗತಿಸಿದರೂ ಕೂಡ ಹಳ್ಳಿಕೇರಿ ಗ್ರಾಮದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಈ ಭಾಗದಲ್ಲಿ ನಿರ್ಮಾಣವಾಗದೆ ಇರುವ ಕಾರಣ ಗ್ರಾಮಸ್ಥರು ಮತ್ತು ವಾಹನಗಳ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿದೆ.

ಹಳ್ಳಿಕೇರಿ ಗ್ರಾಮಸ್ಥರ ಅಳಲು:

ಬಲಭಾಗ ಮತ್ತು ಎಡಭಾಗದಲ್ಲಿ ಗ್ರಾಮ ಇರುವುದರಿಂದ ಮತ್ತು ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟಿ ಶಾಲೆಗಳಿಗೆ ತೆರಳಬೇಕಾಗಿರುವುದು ಮತ್ತು ಜಮೀನುಗಳಿಗೆ ರೈತರು ತೆರಳಬೇಕಾಗಿರುವ ಹಿನ್ನೆಲೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಈ ಭಾಗದಲ್ಲಿ ಪ್ಲೈ ಓವರ್‌ ನಿರ್ಮಿಸಬೇಕೆಂದು ಬಹಳ ವರ್ಷಗಳ ಬೇಡಿಕೆ ಇದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದು, ಕಳೆದ ಕೆಲ ವರ್ಷಗಳಿಂದ ಪುನಃ ಪ್ರಾರಂಭ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳು ಧೂಳಿನಿಂದ ಆವೃತವಾಗಿವೆ. ಧೂಳಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಎದುರಾಗುವ ಭೀತಿ ಒಂದು ಕಡೆಯಾದರೆ ಸಾರ್ವಜನಿಕರು ಮತ್ತು ವಾಹನ ಸವಾರರು ಜೀವಭಯದಲ್ಲಿಯೇ ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಮನೆಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ತಮ್ಮ ಅಂಗಡಿಗೆ ಮತ್ತು ಮನೆಗಳಿಗೆ ಧೂಳು ಬರಬಾರದೆಂದು ಮುನ್ನೆಚ್ಚರಿಕೆ ಕ್ರಮವಾಗಿ ಪ್ಲಾಸ್ಟಿಕ್ ತಾಡಪತ್ರಿ ಕಟ್ಟಿಕೊಂಡಿದ್ದಾರೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿದ್ದಾರೆ.ಹಳ್ಳಿಕೇರಿ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಸ್ಥರ ಬೇಡಿಕೆಯಂತೆ ಪ್ಲೈಓವರ್ ನಿರ್ಮಿಸದೆ ಇರುವ ಕಾರಣ ಮತ್ತು ಸರಿಯಾದ ರಸ್ತೆ ಇರದೆ ಇರುವ ಕಾರಣ ಬೈಕ್, ಕಾರು, ಭಾರಿ ವಾಹನಗಳು ಹರಸಾಹಸ ಪಟ್ಟು ರಸ್ತೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇದೆ. ಸರ್ಕಾರದವರು ಜನರ ಅಹವಾಲಿಗೆ ಸ್ಪಂದಿಸಿ ಇದಕ್ಕೆ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು.

ಮಂಜು ಗೌಡರ, ಬೈಕ್ ಸವಾರ