ಸಾರಾಂಶ
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ತುಕ್ಕು ಹಿಡಿದ ಕಿಟಕಿ, ಭದ್ರವಿಲ್ಲದ ಬಾಗಿಲುಗಳು, ಬಿರುಕು ಬಿಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿರುವ ಗೋಡೆಗಳು, ಮಳೆ ಬಿದ್ದರೆ ಸೋರುವ ಕಟ್ಟಡದ ಮೇಲ್ಛಾವಣಿ, ಕಟ್ಟಡದೊಳಗೆ ಕಾಲಿಟ್ಟರೆ ಉಸಿರುಗಟ್ಟುವ ಪರಿಸ್ಥಿತಿ, ಮುರಿದ ಪೀಠೋಪಕರಣಗಳು, ಕೂತರೆ ಮೂಗಿಗೆ ಬಡಿಯುವ ದುರ್ವಾಸನೆ...ಇದು ರೇಷ್ಮೆ ನಗರದ ಹೆಲ್ತ್ ಕಾಲೋನಿಯಲ್ಲಿರುವ ತಾಲೂಕು ಮಟ್ಟದ ಸಾರ್ವಜನಿಕ ಗ್ರಂಥಾಲಯದ ಕಟ್ಟಡದ ದುಸ್ಥಿತಿ. ಜ್ಞಾನ ದೇಗುಲದಂತೆ ಇರಬೇಕಿದ್ದ ಗ್ರಂಥಾಲಯ ಕಟ್ಟಡ ಸಂಪೂರ್ಣ ಅವ್ಯವಸ್ಥೆಗಳ ಆಗರದಿಂದ ಕೂಡಿ ಓದುಗರಿಂದ ದೂರ ಉಳಿದಿದೆ.ಯಾವುದೇ ಸೌಲಭ್ಯ ಇಲ್ಲ
ತಾಲೂಕು ಮಟ್ಟದ ಗ್ರಂಥಾಲಯ ಸ್ಥಾಪನೆಯಾಗಿ ಹಲವು ವರ್ಷಗಳೇ ಕಳೆದರೂ ಇಂದಿಗೂ ಸುಸಜ್ಜಿತ ಕಟ್ಟಡ ಹೊಂದಿಲ್ಲ. ಇದರಿಂದಾಗಿ ಗ್ರಂಥಾಲಯ ಓದುಗರನ್ನು ಸೃಷ್ಟಿಸುವಲ್ಲಿ ಹಿಂದೆ ಬಿದ್ದಿದೆ. ಕನಿಷ್ಠ ಇರಬೇಕಾದ ಯಾವ ಮೂಲ ಸೌಕರ್ಯಗಳು ಗ್ರಂಥಾಲಯದಲ್ಲಿ ಇಲ್ಲದೇ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಓದುಗರು ಕಟ್ಟಡದೊಳಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.ಯಾವುದೋ ಹಳೆಯ ಕಾಲದ ಪಾಳು ಬಿದ್ದ ಕಟ್ಟಡದಂತೆ ಇರುವ ಗ್ರಂಥಾಲಯ ಕಟ್ಟಡ ಇಂದೋ ನಾಳೆಯೋ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಮಳೆ ಬಂದಾಗ ಇಡೀ ಕಟ್ಟಡ ಸಂಪೂರ್ಣ ಸೋರುತ್ತದೆ. ಎಲ್ಲಿ ಮೇಲ್ಛಾವಣಿ ಕುಸಿದು ಬೀಳುತ್ತೋ ಎಂಬ ಆತಂಕ ಎಂತಹವರಿಗೂ ಕಾಡುತ್ತದೆ. ಕನಿಷ್ಠ ಕೂರಲು ಸಮರ್ಪಕ ಆಸನಗಳೂ ಇಲ್ಲ. ಕಟ್ಟಡದಲ್ಲಿರುವ ಪೀಠೋಪಕರಣಗಳು, ಟೇಬಲ್‌ಗಳು ಮುರಿದು ಬಿದ್ದಿವೆ. ಗ್ರಂಥಾಲಯಕ್ಕೆ ಒಂದು ಅಂದ, ಚೆಂದದ ನಾಮಫಲಕ ಕೂಡ ಇಲ್ಲ.
ಶಿಥಿಲಗೊಂಡ ಗ್ರಂಥಾಲಯಗ್ರಂಥಾಲಯದಲ್ಲಿ ಓದುಗರು ಕೂತು ಪ್ರಶಾಂತವಾಗಿ ಓದುವ ಕಡೆ ಗಮನ ಕೊಡುವ ವಾತಾವರಣ ಇಲ್ಲದೇ ಓದುಗರೇ ಗ್ರಂಥಾಲಯಕ್ಕೆ ಬರುವುದನ್ನು ಕೈ ಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ತಾಲೂಕು ಮಟ್ಟದ ಗ್ರಂಥಾಲಯ ಕಟ್ಟಡ ಅವ್ಯವಸ್ಥೆಗಳ ಆಗರವಾಗಿ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕುಡಿಯುವ ನೀರಿನಿಂದ ಹಿಡಿದು, ಶೌಚಾಲಯ ಸೌಕರ್ಯ, ಬೆಳಕು, ಗಾಳಿ ವಾತಾವರಣ ಇಲ್ಲದೇ ಇಡೀ ಕಟ್ಟಡದ ಗೋಡೆಗಳಿಗೆ ಪಾಚಿ ಕಟ್ಟಿ ದಿನೇ ದಿನೇ ಶಿಥಿಲಗೊಳ್ಳುವಂತಾಗಿದೆ. ಪರ್ಯಾಯ ಕಟ್ಟಡ ಅಗತ್ಯ
ಇನ್ನೂ ಗ್ರಂಥಾಲಯ ಕಟ್ಟಡವನ್ನು ಯಾರೇ ನೋಡಿದರೂ ಇದಕ್ಕೆ ಪರ್ಯಾಯ ಕಟ್ಟಡ ಬೇಕು ಅನಿಸುತ್ತದೆ. ಕ್ಷೇತ್ರದ ಶಾಸಕರು ಗ್ರಂಥಾಲಯದ ಹೊಸ ಕಟ್ಟಡಕ್ಕೆ ಬೇಕಾದ ಅನುದಾನ, ಜಾಗವನ್ನು ಮಂಜೂರು ಮಾಡಿಸಿ ಕೊಡುವ ನಿಟ್ಟಿನಲ್ಲಿ ಮುಂದಾದರೆ ಸಾಕಷ್ಟು ವಿದ್ಯಾವಂತರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುವ ಯುವ ಸಮೂಹಕ್ಕೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಶಾಸಕರು ವಿಶೇಷ ಕಾಳಜಿ ವಹಿಸಿ ಗ್ರಂಥಾಲಕ್ಕೆ ಅಗತ್ಯವಾದ ಮೂಲ ಸೌಕರ್ಯ, ಹೊಸ ಕಟ್ಟಡ ವ್ಯವಸ್ಥೆ ಕಡೆಗೆ ಅಲೋಚಿಸಬೇಕಿದೆ ಎಂದು ಓದುಗರು ಒತ್ತಾಯಿಸುತ್ತಿದ್ದಾರೆ.