ಎಣ್ಣೆಹೊಳೆ-ಹಟ್ಟೆ ಪುಂಚಮಾರು ಸೇತುವೆ ಕುಸಿತ ಭೀತಿ

| Published : Nov 03 2025, 03:03 AM IST

ಎಣ್ಣೆಹೊಳೆ-ಹಟ್ಟೆ ಪುಂಚಮಾರು ಸೇತುವೆ ಕುಸಿತ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ-ಹಟ್ಟೆ ಪುಂಚಮಾರು ಸಂಪರ್ಕಿಸುವ ಸೇತುವೆ ಹದಗೆಟ್ಟು ಕುಸಿಯುವ ಭೀತಿಯಲ್ಲಿದ್ದು, ನಿತ್ಯ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಇದೆ.

ಶೀಘ್ರ ದುರಸ್ತಿಗೆ ನಾಗರಿಕರ ಆಗ್ರಹ । 27 ಮನೆಗಳಿಗೆ ಸಂಪರ್ಕ ಕೊಂಡಿ ಸೇತುವೆ

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ-ಹಟ್ಟೆ ಪುಂಚಮಾರು ಸಂಪರ್ಕಿಸುವ ಸೇತುವೆ ಹದಗೆಟ್ಟು ಕುಸಿಯುವ ಭೀತಿಯಲ್ಲಿದ್ದು, ನಿತ್ಯ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಇದೆ.

ಈ ಸೇತುವೆ ಸಣ್ಣದಾದರೂ ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ಗ್ರಾಮದ ಸುಮಾರು 27 ಮನೆಗಳಿಗೆ ಸಂಚಾರದ ಕೊಂಡಿಯಾಗಿದೆ. ವಿದ್ಯಾರ್ಥಿಗಳು, ರೈತರು, ಕೆಲಸಕ್ಕೆ ಹೋಗುವ ಕಾರ್ಮಿಕರು ಎಲ್ಲರೂ ಪ್ರತಿದಿನ ಈ ಸೇತುವೆ ಬಳಸುತ್ತಿದ್ದಾರೆ. ಆದರೆ ಈಗ ಸೇತುವೆಯ ಬಿರುಕು ಬಿಟ್ಟ ಮೇಲ್ಮೈ, ಕೊಚ್ಚಿ ಹೋದ ಅಡಿ ಭಾಗ ಆತಂಕ ಹುಟ್ಟಿಸಿದೆ.

ಸುಮಾರು ಒಂಬತ್ತು ವರ್ಷಗಳ ಹಿಂದೆ, ಸ್ಥಳೀಯ ಉದ್ಯಮಿಯೊಬ್ಬರು ಸ್ವಂತ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಿದ್ದರು. ಸುಮಾರು 8 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ, ಆ ಸಮಯದಲ್ಲಿ ಗ್ರಾಮಸ್ಥರಿಗೆ ದೊಡ್ಡ ವರದಾನವಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಿರ್ವಹಣೆ ಹಾಗೂ ದುರಸ್ತಿಯಾಗದ ಹಿನ್ನೆಲೆ ಕುಸಿಯುವ ಹಂತ ತಲುಪಿದೆ.

ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಸೇತುವೆಯ ಕೆಳಭಾಗದ ಪೈಪ್‌ಗಳು ಸಂಪೂರ್ಣವಾಗಿ ಕಸ, ಕಡ್ಡಿ ಮತ್ತು ಮರದ ತುಂಡುಗಳಿಂದ ಮುಚ್ಚಿಕೊಂಡಿತ್ತು. ಇದರಿಂದ ನೀರಿನ ಒತ್ತಡ ಹೆಚ್ಚಾಗಿ ಸೇತುವೆಯ ಎಡಪಾರ್ಶ್ವದ ಮಣ್ಣು ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಕಾಂಕ್ರೀಟ್‌ನ ಅಡಿಭಾಗ ಬಹುತೇಕ ಟೋಳ್ಳಾಗಿದೆ. ಹಿಂದೆ ಅದಕ್ಕೆ ಬೆಂಬಲವಾಗಿ ನೀಡಿದ್ದ ಕಲ್ಲುಗಳು ಮತ್ತು ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದೆ. ಸೇತುವೆಯ ಮೇಲ್ಮೈಯಲ್ಲಿಯೂ ಅನೇಕ ಬಿರುಕುಗಳು ಕಾಣಿಸಿಕೊಂಡಿದ್ದು, ವಾಹನಗಳು ಹಾದುಹೋಗುವಾಗ ಅದು ನಡುಗುತ್ತದೆ.

ದಿನವೂ ಹತ್ತಾರು ವಿದ್ಯಾರ್ಥಿಗಳು ಈ ಸೇತುವೆಯ ಮೂಲಕವೇ ಎಣ್ಣೆಹೊಳೆ ಶಾಲೆ ಮತ್ತು ರಾಧಾ ನಾಯಕ್ ಸರ್ಕಾರಿ ಪ್ರೌಢಶಾಲೆಗೆ ತೆರಳುತ್ತಾರೆ. ಅವರ ಪೋಷಕರು ಪ್ರತಿದಿನವೂ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕದಲ್ಲಿದ್ದಾರೆ. ಮಳೆಗಾಲದಲ್ಲಿ ಸೇತುವೆಯ ಮೇಲೆ ನಿಂತು ಸಂಚರಿಸುವುದೇ ಸಾಹಸಕರ ಕಾರ್ಯವಾಗಿದೆ.ಕೃಷಿಕರಿಗೆ ಸಮಸ್ಯೆ:

ಸೇತುವೆ ಹದಗೆಟ್ಟಿರುವುದರಿಂದ ಕೃಷಿಕರಿಗೆ ಸಮಸ್ಯೆಯಾಗಲಿದೆ. ಈ ಭಾಗದಲ್ಲಿ ಗದ್ದೆ ಕಟಾವು ಕಾಲ ಪ್ರಾರಂಭವಾಗಿದ್ದು, ಭತ್ತ ಕಟಾವು ಮಾಡಿದ ನಂತರ ಅದನ್ನು ಸಾಗಿಸಲು ಟ್ರಾಕ್ಟರ್‌ಗಳು, ವಾಹನಗಳು ಅಗತ್ಯವಾಗುತ್ತದೆ. ಆದರೆ ಈಗ ಸೇತುವೆ ಮೂಲಕ ಯಾವುದೇ ವಾಹನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಬದಲಿ ಮಾರ್ಗ ಬಳಸಲು ಪ್ರಯತ್ನಿಸಿದರೆ ಸುಮಾರು ಆರು ಕಿಲೋ ಮೀಟರ್ ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ. ಆ ಮಾರ್ಗದಲ್ಲಿಯೂ ಡಾಂಬರೀಕರಣವಾಗಿಲ್ಲ, ಮಣ್ಣುಮಾರ್ಗವೇ ಆಗಿರುವುದರಿಂದ ಮಳೆ ಬಂದರೆ ಸಂಪೂರ್ಣ ಕೆಸರುಮಯವಾಗುತ್ತದೆ. ಹೀಗಾಗಿ ಗ್ರಾಮಸ್ಥರು ಪರ್ಯಾಯವಿಲ್ಲದ ಸ್ಥಿತಿಯಲ್ಲಿ ಸಿಲುಕಿದ್ದಾರೆ.

ಸ್ಥಳೀಯ ಪಂಚಾಯಿತಿ ಅಧ್ಯಕ್ಷರು ಹಾಗೂ ಅಧಿಕಾರಿಗಳು ಈ ಸೇತುವೆ ದುರದ್ತಿಗಾಘಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.

ಆದರೆ ಕೇವಲ ಪತ್ರ ಬರೆಯುವುದರಿಂದ ಕೆಲಸ ಆಗುವುದಿಲ್ಲ. ಪ್ರತಿ ದಿನ ಜೀವದ ಹಂಗು ತೊರೆದು ಸೇತುವೆ ದಾಟುವುದು ಅಸಾಧ್ಯವಾಗಿದೆ. ತಕ್ಷಣ ತಾತ್ಕಾಲಿಕ ರಕ್ಷಣಾ ಕ್ರಮ ಕೈಗೊಳ್ಳದಿದ್ದರೆ ಯಾವುದೇ ಕ್ಷಣದಲ್ಲೂ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂಬುವುದು ಗ್ರಾಮಸ್ಥರ ವಾದ.

ಯಾವುದೇ ದುರ್ಘಟನೆ ನಡೆಯುವ ಮೊದಲು ಈ ಸೇತುವೆಯ ದುರಸ್ತಿ ಕಾರ್ಯ ನಡೆಯಬೇಕಿದೆ. ಗ್ರಾಮಸ್ಥರ ಜೀವ ರಕ್ಷೆಗಾಗಿ ಸಂಬಂಧಿತ ಇಲಾಖೆ ಶೀಘ್ರ ಎಚ್ಚೆತ್ತುಕೊಳ್ಳಬೇಕಿದೆ.------------

ಈ ಸೇತುವೆಯ ಪರಿಸ್ಥಿತಿ ನಮಗೆ ತಿಳಿದಿದೆ. ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನಿಧಿಯಿಂದ ಸೇತುವೆ ದುರಸ್ತಿ ಮಾಡಲು ಕಾರ್ಕಳ ತಹಸೀಲ್ದಾರ್, ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಸ್ಪಂದನೆ ಸಿಗುವ ಭರವಸೆಯಿದೆ.

। ಅಂಕಿತಾ ನಾಯಕ್, ಪಿಡಿಒ ಮರ್ಣೆ ಗ್ರಾಮ ಪಂಚಾಯಿತಿ