ಸಾರಾಂಶ
ಮುತ್ತಿನಕೊಪ್ಪದಲ್ಲಿ ಕಸಾಪದಿಂದ ಕನ್ನಡ ರಾಜ್ಯೋತ್ಸವ- ನುಡಿ ನಿತ್ಯೋತ್ಸವ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಉಳಿದಿದೆ. ಆದರೆ, ದೊಡ್ಡ, ದೊಡ್ಡ ನಗರಗಳಲ್ಲಿ ಜನರು ಕನ್ನಡ ಮರೆಯುತ್ತಿದ್ದು ಕನ್ನಡ ಭಾಷೆ ನಶಿಸಿ ಹೋಗುವ ಭೀತಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಂಸ್ಕೃತಿಕ ರಾಯಭಾರಿ ಕಣಿವೆ ವಿನಯ್ ಕಳವಳ ವ್ಯಕ್ತಪಡಿಸಿದರು.
ಶನಿವಾರ ಮುತ್ತಿನಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ನಿತ್ಯೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜಾನಿಪದ ಕಲೆ ನಶಿಸಿಹೋಗುತ್ತಿದೆ. ಇದನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿವುದು ನಮ್ಮೆಲ್ಲರ ಜವಬ್ದಾರಿ . ಕನ್ನಡ ಹೃದಯ ಭಾಷೆಯಾಗಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಪ್ರತಿಯೊಬ್ಬರೂ ಸಂಸ್ಕೃತಿ ಮೈಗೂಡಿಸಿಕೊಂಡು ಸಂಸ್ಕಾರವಂತರಾಗಿ ಬದುಕಬೇಕು. ಇತರ ಭಾಷೆಗಳನ್ನು ಗೌರವಿಸೋಣ. ಆದರೆ, ಕನ್ನಡ ಭಾಷೆಯನ್ನು ಪ್ರೀತಿಸೋಣ. ತಾ. ಕನ್ನಡ ಸಾಹಿತ್ಯ ಪರಿಷತ್ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ರಸಪ್ರಶ್ನೆ ಹಮ್ಮಿಕೊಂಡು ಮಕ್ಕಳ ಮೆದುಳಿಗೆ ಆಹಾರ ನೀಡಿ ಮಕ್ಕಳ ಜ್ಞಾನ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬಂದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮುತ್ತಿನಕೊಪ್ಪ ಕಾಲೇಜು ಉಪನ್ಯಾಸಕಿ ಆಶಾ ಮಾತನಾಡಿ,ಟಿ.ವಿ. ಮಾದ್ಯಮಗಳಲ್ಲಿ ಬರುವ ರಿಯಾಲಿಟಿ ಶೋ ನಿಜವಾದ ಸಂಸ್ಕೃತಿಯಲ್ಲ. ನಮ್ಮದು ಜಾನಪದ ಸಂಸ್ಕೃತಿಯಾಗಬೇಕು. ಜಾನಪದ ಸಂಸ್ಕೃತಿ ನಮ್ಮ ಜೀವನದಲ್ಲಿ ಶಾಶ್ವತ ಸಂಸ್ಕೃತಿಯಾಗಿ ಉಳಿಯಲಿದೆ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯನ್ನು ಎಲ್ಲರೂ ಉಳಿಸಿ, ಬೆಳೆಸಬೇಕು ಎಂದರು.ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಶಿಧರ್ ಉದ್ಘಾಟಿಸಿ ಮಾತನಾಡಿ, ಕನ್ನಡ ಶಾಲೆ ಉಳಿಸುವ ದೃಷ್ಟಿ ಯಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸಬೇಕು. ಎಲ್ಲರೂ ಒಟ್ಟಾಗಿ ಕನ್ನಡ ಭಾಷೆ ಉಳಿಸಲು ಪ್ರಯತ್ನಿಸೋಣ. ಕನ್ನಡ ಮಾತನಾಡುತ್ತಾ ಬಂದರೆ ಕನ್ನಡ ಭಾಷೆ ಬೆಳೆಯಲಿದೆ ಎಂದರು.
ಮಕ್ಕಳಿಗೆ ರಸ ಪ್ರಶ್ನೆ ನಡೆಸಲಾಯಿತು. ವಿಜೇತ ಮಕ್ಕಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು.ಹಿರಿಯ ಉಪನ್ಯಾಸಕ ಟೂಕಪ್ಪ, ಕನ್ನಡ ಉಪನ್ಯಾಸಕ ವರ್ಗೀಸ್ ಹಾಗೂ ಇತರ ಉಪನ್ಯಾಸಕರು ಇದ್ದರು.