ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಬೃಹತ್ ತಡೆಗೋಡೆ ಕುಸಿಯುವ ಭೀತಿ

| Published : Aug 01 2025, 12:30 AM IST

ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ಬೃಹತ್ ತಡೆಗೋಡೆ ಕುಸಿಯುವ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ 275ಕ್ಕೆ ನಿರ್ಮಿಸಲಾಗಿರುವ ಬೃಹತ್‌ ತಡೆಗೋಡೆ ಕುಸಿಯುವ ಭೀತಿ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ಕ್ಕೆ ನಿರ್ಮಿಸಲಾಗಿರುವ ಬೃಹತ್ ತಡೆಗೋಡೆಯೊಂದು ಕುಸಿಯುವ ಭೀತಿ ಉಂಟಾಗಿದ್ದು, ನಮಗೆ ಸುರಕ್ಷಿತ ಸ್ಥಳದಲ್ಲಿ ಮನೆ ಕೊಡುವಂತೆ ಕಣ್ಣೀರಿಟ್ಟ ವೃದ್ಧೆಯೊಬ್ಬರು ಜಿಲ್ಲಾಧಿಕಾರಿ ಕಾಲು ಹಿಡಿದು ಕಣ್ಣೀರಿಟ್ಟಿದ್ದಾರೆ.

ತಡೆಗೋಡೆಯ ಕೆಳಭಾಗದಲ್ಲಿ ಇರುವ ಐದು ಕುಟುಂಬಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ.

2018 ರ ಭೂಕುಸಿತದಲ್ಲಿ ಮಡಿಕೇರಿಯ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲಾಖೆ ಕುಸಿದ ಸ್ಥಳದಲ್ಲಿ ರು.3 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 275 ರ ತಡೆಗೋಡೆಯಲ್ಲಿ ಭಾರಿ ಬಿರುಕು ಉಂಟಾಗಿದೆ.

ಅಂದಾಜು 75 ರಿಂದ 80 ಅಡಿ ಎತ್ತರ ಇರುವ ಬೃಹತ್ ತಡೆಗೋಡೆಯಾಗಿದ್ದು, ತಳಭಾಗದಿಂದಲೇ ಕಾಂಕ್ರೀಟ್ ಸಂಪೂರ್ಣವಾಗಿ ಮೇಲೆಳುತ್ತಿದೆ. ಇಡೀ ತಡೆಗೋಡೆ ಭಾಗ ಭಾಗವಾಗಿ ಕುಸಿಯುತ್ತಿರುವ ಹಿನ್ನೆಲೆ ತಳಭಾಗದ ಜನರನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಲಿ ಮಾಡಿಸಿದ್ದರು.

ಗುರುವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಭೇಟಿ ನೀಡಿದ್ದು, ಈ ವೇಳೆ ವೃದ್ಧೆ ರತ್ನಮ್ಮ ಜಿಲ್ಲಾಧಿಕಾರಿಯ ಕಾಲಿಡಿದು ಬೇಡಿದ್ದಾರೆ. ಮನೆ ಕೆಲಸ ಮಾಡಿ ಬದುಕು ನಡೆಸುತ್ತಿರುವ ರತ್ನಮ್ಮ , 2018 ರಲ್ಲಿಯೇ ಮನೆ ಬಿದ್ದು ಹೋಗಿದೆ. ಅಂದು ಮನೆ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಇದುವರೆಗೆ ಮನೆ ಕೊಟ್ಟಿಲ್ಲ ಎಂದು ಜಿಲ್ಲಾಧಿಕಾರಿಯ ಕಾಲಿಡಿದು ಸುರಕ್ಷಿತ ಸ್ಥಳದಲ್ಲಿ ಮನೆ ನೀಡುವಂತೆ ಕಣ್ಣೀರಿಟ್ಟರು.

ಚಿಕ್ಕಪುಟ್ಟ ಮಕ್ಕಳ ಕರೆದು ಅಗತ್ಯ ವಸ್ತುಗಳ ತೆಗೆದುಕೊಂಡು ಮನೆ ಮಾಡಿದ್ದಾರೆ;

ಸಾಕು ಪ್ರಾಣಿಗಳಾದ ಕೋಳಿ, ಹಂದಿ ಮತ್ತು ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಬಿಟ್ಟು ಕುಟುಂಬಗಳು ಹೊರಟಿದ್ದಾರೆ. ತಡೆಗೋಡೆ ಕುಸಿದಲ್ಲಿ ಐದು ಮನೆಗಳು ಮುಚ್ಚಿ ಹೋಗುವ ಸಾಧ್ಯತೆ ಉಂಟಾಗಿದೆ.

ಮತ್ತೊಂದೆಡೆ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಪರ್ಕ ಕಡಿತ ಸಾಧ್ಯತೆ ಎದುರಾಗಿದೆ. ಸದ್ಯ ರಸ್ತೆಯ ಒಂದು ಬದಿಗೆ ಬ್ಯಾರಿಕೇಡ್ ಅಳವಡಿಸಿ ಕುಸಿಯುತ್ತಿರುವ ಭಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಮಾಡಲಾಗಿದೆ.