ಉಳ್ಳಾಲ: ಶಿಕ್ಷಣದ ಮೂಲಕವೇ ಬಡತನವನ್ನು ದೂರ ಮಾಡಿ ಸಮಾಜದಲ್ಲಿ ಸ್ವಾಭಿಮಾನದ ಜೊತೆಗೆ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಡಾ. ಯು.ಟಿ ಖಾದರ್ ಹೇಳಿದರು.ಯು.ಟಿ ಫರೀದ್ ಫೌಂಡೇಶನ್ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಬಂಟ್ವಾಳ ತಾಲೂಕು ಆಶ್ರಯದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಉಳ್ಳಾಲ ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬುಧವಾರ ಯುನಿಟಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಬಾರಿ ರಾಜ್ಯದಲ್ಲೇ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ. ಅತ್ಯಧಿಕ ಡಿಸ್ಟಿಂಕ್ಷನ್ ಪಡೆದ ಶಾಲೆಗಳೂ ಉಳ್ಳಾಲ ಕ್ಷೇತ್ರದಲ್ಲಿವೆ. ಕಳೆದ ಬಾರಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದ ಸಂದರ್ಭದಲ್ಲಿ ವಿವಿಧ ತರಬೇತಿ ಶಿಬಿರ, ಪ್ರೋತ್ಸಾಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಯಿತು. ಅದರ ಫಲವಾಗಿ ಅನುತ್ತೀರ್ಣರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದರು.ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಟಿ.ಎಸ್. ಗಟ್ಟಿ ಮಾತನಾಡಿ, ಯು.ಟಿ ಫರೀದ್ ಫೌಂಡೇಶನ್ ಮೂಲಕ ನಡೆಯುತ್ತಿರುವ ಈ ಕಾರ್ಯಕ್ರಮ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿರುವ ಕೀರ್ತಿ ಯು.ಟಿ ಖಾದರ್ ಅವರಿಗೆ ಸಲ್ಲುತ್ತದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿರುವುದು ಕ್ಷೇತ್ರದ ಶೈಕ್ಷಣಿಕ ಬೆಳವಣಿಗೆಯ ಪ್ರತೀಕ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಣಚೂರು ಮೋನು, ಬಂಟ್ವಾಳ ತಾ.ಪಂ.ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಸುರೇಶ್ ಭಟ್ನಗರ , ಜಗದೀಶ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಎನ್ ಎಸ್ ಕರೀಮ್, ಕೆಎಮ್ ಕೆ ಮಂಜನಾಡಿ, ಮನ್ಸೂರ್ ಮಂಚಿಲ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಸಾಜಿದ್ ಉಳ್ಳಾಲ, ರಫೀಕ್ ಅಂಬ್ಲಮೊಗರು, ಸಲಾಮ್ ಉಚ್ಚಿಲ, ಮುಸ್ತಫಾ ಮಲಾರ್, ಮೊಹಮ್ಮದ್ ರಫೀಕ್, ಲಿಲ್ಲಿ ಫಾಯಿಸ್, ಶಶಿಕಲ, ರಝಾಕ್ ಇರಾ ಜಬ್ಬಾರ್ ಬೋಳಿಯಾರ್ ರಝಿಯಾ ಇಬ್ರಾಹೀಮ್, ಮುರಳೀಧರ ಶೆಟ್ಟಿ, ಪುರುಷೋತ್ತಮ ಪಿಲಾರ್, ದಿನೇಶ್ ರೈ, ಯೂಸುಫ್ ಬಾವ ದೇರಳಕಟ್ಟೆ, ಮತ್ತಿತರರು ಉಪಸ್ಥಿತರಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್ ಆರ್ ಸ್ವಾಗತಿಸಿದರು. ತ್ಯಾಗಂ ಹರೇಕಳ ನಿರೂಪಿಸಿದರು.

100 ಶೇಕಡಾ ಫಲಿತಾಂಶ ದಾಖಲಿಸಿದ ಉಳ್ಳಾಲ ತಾಲೂಕಿನ ಸರಕಾರಿ, ಅನುದಾನಿತ , ಅನುದಾನ ರಹಿತ ಶಾಲೆಗಳು ಒಟ್ಟು 41 ಶಿಕ್ಷಣ ಸಂಸ್ಥೆಗಳನ್ನೂ ಗೌರವಿಸಲಾಯಿತು.

ಮೊಂಟೆಪದವು ಕೆ ಪಿ ಎಸ್ ಶಾಲೆಯ ವಿದ್ಯಾರ್ಥಿನಿ ಸಿಂಚನಾ 620 ಅಂಕ ಹಾಗೂ ಕೊಣಾಜೆ ವಿಶ್ವಮಂಗಳ ಪ್ರೌಢಶಾಲೆಯ ಶಾಲೆಯ ವಿದ್ಯಾರ್ಥಿನಿ ಮಾನ್ವಿ 620 ಅತ್ಯಧಿಕ ಅಂಕ ಪಡೆದಿದ್ದು, ಇಬ್ಬರನ್ನು ವಿಶೇಷವಾಗಿ ಗೌರವಿಸಲಾಯಿತು. ಉಳ್ಳಾಲ ತಾಲೂಕಿನಲ್ಲಿ ಡಿಸ್ಟಿಂಕ್ಷನ್ ಪಡೆದ ಒಟ್ಟು 434 ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು. 600ಕ್ಕೂ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.