ಕೋಟತಟ್ಟು ಪಡುಕರೆಯ ಅರಮ ದೇಗುಲದ ಸಮೀಪ ಟೀಮ್ ಭವಾಬ್ಧಿ 5ನೇ ವರ್ಷೋತ್ಸವ - ಕಡಲೂರ ಸನ್ಮಾನ ಕಾರ್ಯಕ್ರಮ

ಕುಂದಾಪುರ: ನಮ್ಮ ದೇಶ ಸಾಂಸ್ಕೃತಿಕತೆಯ ಗಟ್ಟಿ ನೆಲವಾಗಿದ್ದು, ಕಲಾವಿದರ ಸೃಷ್ಟಿಯ ತಾಣವಾಗಿದೆ ಎಂದು ಇಲ್ಲಿನ ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಎಚ್.ಸುಜಯೀಂದ್ರ ಹಂದೆ ಹೇಳಿದರು.

ಅವರು ಕೋಟತಟ್ಟು ಪಡುಕರೆಯ ಅರಮ ದೇಗುಲದ ಸಮೀಪ ಟೀಮ್ ಭವಾಬ್ಧಿ 5ನೇ ವರ್ಷೋತ್ಸವ - ಕಡಲೂರ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡುತಿದ್ದರು.ದೇಶದ ಯಾವುದೇ ವ್ಯವಸ್ಥೆಯನ್ನು ಹಾಳುಗೆಡವಬಹುದು, ಆದರೆ ಇಲ್ಲಿನ ಸಾಂಸ್ಕ್ರತಿಕತೆಯನ್ನು ನಾಶ ಮಾಡಲು ಸಾಧ್ಯವಿಲ್ಲ, ಅದರಲ್ಲೂ ಭಾರತ ಶ್ರೀಮಂತ ಕಲಾ ಪರಂಪರೆಯ ದೇಶವಾಗಿದೆ, ಆದರೇ ಕಲಾವಿದರಿಗೆ ಅಹಂ ಇರಬಾರದು, ಅದಿದ್ದವರು ಕಲಾವಿದರಾಗಿ ಉಳಿಯಲು ಸಾಧ್ಯವಿಲ್ಲ ಎಂದವರು ಹೇಳಿದರು.

ಉದ್ಯಮಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಅವರು ಭಾಗವತ, ಭಜಕ ಪ್ರಶಾಂತ್ ಪಡುಕರೆ ಅವರಿಗೆ ಕಡಲೂರ ಸನ್ಮಾನ ನೀಡಿ ಗೌರವಿಸಿದರು. ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ವಾಟರ್ ಫಿಲ್ಟರನ್ನು ಹಸ್ತಾಂತರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಟೀಮ್ ಭವಾಬ್ಧಿ ಪ್ರಮುಖ ಶಿವಾನಂದ ಕುಂದರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ಆಡಳಿತ ವೈದ್ಯರಾದ ಡಾ. ಪ್ರಕಾಶ್ ಸಿ. ತೋಳಾರ್ , ಕೋಟ ಸಹಕಾರಿ ವ್ಯವಸಾಯಕ ಸಂಘದ ಉಪಾಧ್ಯಕ್ಷ ಎಚ್. ನಾಗರಾಜ್ ಹಂದೆ, ಕೋಟತಟ್ಟು ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಹಂದಟ್ಟು, ಮಣೂರು ಮೀನಗಾರರ ಪ್ರಾಥಮಿಕ ಸಂಘದ ಅಧ್ಯಕ್ಷ ರಾಮ ಬಂಗೇರ ಉಪಸ್ಥಿತರಿದ್ದರು.ಟೀಮ್ ಭವಾಬ್ಧಿಯ ದೇವೇಂದ್ರ ಶ್ರೀಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರವೀಂದ್ರ ತಿಂಗಳಾಯ ಕಾರ್ಯಕ್ರಮ ಸಂಯೋಜಿಸಿದರು. ನಂತರ ಹನುಮಗಿರಿ ಮೇಳದ ಕಲಾವಿದರಿಂದ ವರ್ಣ ಪಲ್ಲಟ ಯಕ್ಷಗಾನ ಪ್ರದರ್ಶನಗೊಂಡಿತು.