ಅಕ್ರಮ ಮರಳು ಸಾಗಣೆ ಲಾರಿಗಳ ನಿರಂತರ ಓಡಾಟದಿಂದ ರಸ್ತೆ ಹಾಳಾಗುವ ಜತೆಗೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಖಂಡಿಸಿ ಕುಷ್ಟಗಿ ತಾಲೂಕಿನ ತಾವರಗೇರಾ ಸಮಿಪದ ಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಗ್ರಾಮಸ್ಥರು 4 ಮರಳು ಟಿಪ್ಪರ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಕುಷ್ಟಗಿ: ಅಕ್ರಮ ಮರಳು ಸಾಗಣೆ ಲಾರಿಗಳ ನಿರಂತರ ಓಡಾಟದಿಂದ ರಸ್ತೆ ಹಾಳಾಗುವ ಜತೆಗೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಖಂಡಿಸಿ ತಾಲೂಕಿನ ತಾವರಗೇರಾ ಸಮಿಪದ ಪುರ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಗ್ರಾಮಸ್ಥರು 4 ಮರಳು ಟಿಪ್ಪರ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಗ್ರಾಮದ ಮೂಲಕ ಪ್ರತಿನಿತ್ಯ ಹತ್ತಾರು ಮರಳು ತುಂಬಿದ ಭಾರಿ ಗಾತ್ರದ ಲಾರಿಗಳು ಸಂಚರಿಸುತ್ತಿದ್ದು, ಇದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವೃದ್ಧರು ಹಾಗೂ ಮಕ್ಕಳು ರಸ್ತೆ ದಾಟಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು, ಲಾರಿಗಳ ಸಂಚಾರದಿಂದ ಧೂಳು ಹಾಗೂ ಶಬ್ದದ ಪರಿಣಾಮ ಮಕ್ಕಳ ಬೋಧನೆ ಮತ್ತು ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.ಹಲವು ವರ್ಷಗಳಿಂದ ಸಮೀಪದ ಮರಳು ಕೇಂದ್ರಗಳಿಂದ ಮರಳು ಸಾಗಣೆ ನಡೆಯುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರಿ ಗಾತ್ರದ ಲಾರಿಗಳ ಓಡಾಟ ಹೆಚ್ಚಾಗಿದೆ. ಅಧಿಕೃತ ಪರವಾನಗಿ ಪಡೆದು ಮರಳು ಸಾಗಿಸುವ ವಾಹನಗಳು ಹಗಲು ಸಂಚರಿಸಿದರೆ, ಅಕ್ರಮವಾಗಿ ಮರಳು ಸಾಗಿಸುವ ಲಾರಿಗಳು ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ವೇಗವಾಗಿ ಓಡಿಸುವುದರಿಂದ ಗ್ರಾಮಸ್ಥರು ನಿದ್ದೆಯಿಲ್ಲದೆ ದಿನ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಕಗಿರಿ ಹಾಗೂ ಸಿಂಧನೂರು ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಮರಳು ತುಂಬಿಕೊಂಡು ಬರುವ ಲಾರಿಗಳು ಒಳದಾರಿಗಳ ಮೂಲಕ ಸಂಚರಿಸುತ್ತಿವೆ. ಅಕ್ರಮ ಸಾಗಾಟ ತಡೆದು, ಭಾರಿ ವಾಹನಗಳ ಸಂಚಾರ ನಿಯಂತ್ರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಪ್ರತಿಭಟನಾ ಸ್ಥಳಕ್ಕೆ ತಾವರಗೇರಾ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಪ್ಪ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಸ್ಪಿ ಭರವಸೆ: ನಮ್ಮ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ಲಾರಿಗಳ ನಿರಂತರ ಓಡಾಟದಿಂದ ರಸ್ತೆ ಹಾಳಾಗುವ ಜತೆಗೆ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಖಂಡಿಸಿ 4 ಮರಳು ಟಿಪ್ಪರಗಳನ್ನು ತಡೆದು ಪ್ರತಿಭಟನೆ ನಡೆಸಲಾಗಿದ್ದು, ಸ್ಥಳಕ್ಕೆ ಪಿಎಸ್ಐ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ. ಈ ಕುರಿತು ಎಸ್ಪಿ ಅವರೊಂದಿಗೂ ಮಾತನಾಡಿದ್ದು, ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಾಯ್ದು ನೋಡಬೇಕಿದೆ ಎಂದು ಗ್ರಾಮಸ್ಥ ಸೋಮಣ್ಣ ಪುರ ಹೇಳಿದರು.