ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

| Published : Aug 02 2025, 12:00 AM IST

ಸಾರಾಂಶ

ಕಳೆದ 35 ವರ್ಷಗಳಿಂದ ಒಳ ಮೀಸಲಾತಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸುಪ್ರೀಂಕೋರ್ಟ್ ಒಳ ಮೀಸಲಾತಿ ನೀಡುವಂತೆ ಆದೇಶಿಸಿ ವರ್ಷ ಆಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹಾಗೂ ಒಳ ಮೀಸಲಾತಿ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ, ಮೀನಾಮೇಷ ಖಂಡಿಸಿ ಮಾದಿಗ ಸಂಘಟನೆಗಳ ಒಕ್ಕೂಟ, ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟ ಹಾಗೂ ಮಾದಿಗ ಸಫಾಯಿ ಕರ್ಮಚಾರಿ ಒಕ್ಕೂಟದವರು ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟಿಸಿದರು.

ಮಾದಿಗ ಸಂಘಟನೆಗಳ ಒಕ್ಕೂಟ

ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಮಾದಿಗ ಸಂಘಟನೆಗಳ ಒಕ್ಕೂಟದವರು ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟಿಸಿದರು.

ಈ ವೇಳೆ ಒಕ್ಕೂಟದ ಸಂಚಾಲಕ ಕೆ. ಪ್ರಸನ್ನ ಚಕ್ರವರ್ತಿ ಮಾತನಾಡಿ, ಕಳೆದ 35 ವರ್ಷಗಳಿಂದ ಒಳ ಮೀಸಲಾತಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸುಪ್ರೀಂಕೋರ್ಟ್ ಒಳ ಮೀಸಲಾತಿ ನೀಡುವಂತೆ ಆದೇಶಿಸಿ ವರ್ಷ ಆಗಿದೆ. ಆದರೆ, ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದೆ. ಪಕ್ಕದ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಆದರೆ, ಸಿದ್ದರಾಮಯ್ಯ ಸರ್ಕಾರಕ್ಕೆ ಯಾರಿಂದ ಒತ್ತಡ ಇದೆಯೇ ಗೊತ್ತಿಲ್ಲ. ಮಾದಿಗ ಸಮುದಾಯದ 107 ಉಪ ಜಾತಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಆ.4 ರಂದು ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸ್ವೀಕರಿಸುವ ರಾಜ್ಯ ಸರ್ಕಾರ ಕೂಡಲೇ ಒಳ ಮೀಸಲಾತಿ ಜಾರಿ ಮಾಡದಿದ್ದರೆ. ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ. ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸುವ ಸಮಯದಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಡ ಹೇರಲು ರಾಜ್ಯಾದ್ಯಂತ ಹೋರಾಟಗಾರರು ಆಗಮಿಸಲಿದ್ದಾರೆ ಎಂದರು.

ಮುಖಂಡ ಭಾಸ್ಕರ್ ಪ್ರಸಾದ್ ಮಾತನಾಡಿ, ಈ ಸರ್ಕಾರ ಸತ್ತು ಹೋಗಿದೆ. ನಾವು ಯಾವಾಗ ಬೀದಿಗಿಳಿಯುತ್ತೇವೋ ಆಗೆಲ್ಲಾ ಸರ್ಕಾರ ಮಾತನಾಡುತ್ತಿದೆ. ಬಡ್ತಿ ಮೀಸಲಾತಿ ಇನ್ನೂ ನಿಲ್ಲಿಸಿಲ್ಲ. ಆ.4 ರಂದು ವರದಿ ಸ್ವೀಕರಿಸುತ್ತಿದ್ದು, ಈ ಮಧ್ಯದಲ್ಲಿ ಪಕ್ಷಾತೀತ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಯಾವನೇ ರಾಜಕಾರಣಿ ನಮ್ಮ ಸರ್ಕಾರದ ಮೇಲೆ ನಂಬಿಕೆ ಇಡಿ, ಹೋರಾಟ ಬೇಡ ಎಂದರೆ ಕಪಾಳಕ್ಕೆ ಹೊಡೆಯಿರಿ ಎಂದು ಕರೆ ನೀಡಿದರು.

ಮುಖಂಡರಾದ ಅರುಣ್ ಕುಮಾರ್, ನಾರಾಯಣ ಮೊದಲಾದವರು ಇದ್ದರು.

ಮಾದಿಗ ಸಫಾಯಿ ಕರ್ಮಚಾರಿ ಒಕ್ಕೂಟ

ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಫಾಯಿ ಕರ್ಮಚಾರಿ ಒಕ್ಕೂಟದವರು ಗಾಂಧಿ ಚೌಕದಲ್ಲಿ ಪ್ರತಿಭಟಿಸಿದರು.

ಒಳಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ ವರ್ಷ ಕಳೆದರೂ ರಾಜ್ಯ ಸರ್ಕಾರ ಕಾಲಾಹರಣ ಮಾಡಿ, ನಾಗಮೋಹನ್‌ ದಾಸ್ ವರದಿಯನ್ವಯ ಒಳಪಂಗಡಗಳನ್ನು ಗುರುತಿಸಲು ಕಾಲಾವಕಾಶ ತೆಗೆದುಕೊಂಡು ಸರ್ವೆ ಮುಕ್ತಾಯವಾಗಿದ್ದರೂ ಜಾರಿಗೆ ನಿರ್ಲಕ್ಷ್ಯ ಮಾಡುತ್ತಿದೆ. ಕೂಡಲೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಮುಖಂಡರಾದ ವೆಂಕಟೇಶ್, ಮುತ್ತುರಾಜು, ಧರ್ಮರಾಜು, ತಿಪ್ಪಯ್ಯ, ಸುಬ್ರಮಣಿ, ಗಂಗಯ್ಯ, ನಾಗರಾಜ ಮೊದಲಾದವರು ಇದ್ದರು.

ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟ

ಸುಪ್ರೀಂಕೋರ್ಟ್ ತೀರ್ಪಿನಂತೆ ತಕ್ಷಣವೇ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.

ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅತೀ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಸಲುವಾಗಿ ಜಾರಿಯಾಗಬೇಕಿರುವ ಒಳ ಮೀಸಲಾತಿಯ ಬೇಡಿಕೆಯು ನನೆಗುದಿಗೆ ಬಿದ್ದಿದೆ. ಈ ಅಸಮಾನತೆಯನ್ನು ಸರಿಪಡಿಸಲು ಸುಪ್ರೀಂಕೋರ್ಟ್ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ. ಆದರೆ, ರಾಜ್ಯ ಸರ್ಕಾರವು ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಆ.15ರ ಸ್ವಾತಂತ್ರ್ಯ ದಿನಾಚರಣೆಯೊಳಗೆ ವಿಳಂಬ ಮಾಡದೆ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಒಂದು ವೇಳೆ ಸರ್ಕಾರ ಈ ಗಡುವಿನೊಳಗೆ ನಮ್ಮ ಬೇಡಿಕೆ ಈಡೇರಿಸಲು ವಿಫಲವಾದರೆ, ರಾಜ್ಯಾದ್ಯಂತ ಹೋರಾಟ ತೀವ್ರವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಒಕ್ಕೂಟದ ಮುಖಂಡರಾದ ಎನ್. ಸ್ವಾಮಿ, ಬಸವರಾಜು, ಆನಂದಕುಮಾರ್, ಎಂ. ಮಹದೇವು, ರಾಜಣ್ಣ, ವೆಂಕಟರಮಣ, ಜಯಸಿಂಹ ಮೊದಲಾದವರು ಇದ್ದರು.