ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿರುವ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ನಗರದ ಚಿಕ್ಕಗಡಿಯಾರ ವೃತ್ತದಲ್ಲಿ ಶನಿವಾರ ಸಂಜೆ ಪ್ರತಿಭಟಿಸಿದರು.ಅಂಬೇಡ್ಕರ್ ಭಾವಚಿತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಸಿ.ಟಿ. ರವಿ ಕ್ಷಮೆ ಕೇಳಬೇಕು ಮತ್ತು ರಾಜೀನಾಮೆ ನೀಡಬೇಕು ಎಂದು ಒಕ್ಕೋರಲಿನಿಂದ ಒತ್ತಾಯಿಸಿದರು.ಈ ವೇಳೆ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಮಾತನಾಡಿ, ನಾಡಿನ ಕೋಟ್ಯಂತರ ಜನರ ಬದುಕಿನಲ್ಲಿ ಬೆಳಕನ್ನು ನೀಡಿದ ಡಾ. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿರುವುದು ಆಘಾತಕಾರಿ. ದೇಶದ ಪ್ರತಿ ನಾಗರಿಕರರಿಗೂ ಕಾನೂನು, ಬದುಕುವ ಹಕ್ಕು, ಜೀವನ ಕ್ರಮದಲ್ಲಿ ಸಾಮಾಜಿಕ ನ್ಯಾಯ ತಂದು ಕೊಟ್ಟವರು ಅಂಬೇಡ್ಕರ್. ಹಾಗಾಗಿ ಮತ್ತೆ ಮತ್ತೆ ನಾವು ಅಂಬೇಡ್ಕರ್ ಎನ್ನುತ್ತೇವೆ. ಇದಕ್ಕೆ ನಮಗೆ ಹೆಮ್ಮೆ ಇದೆ ಎಂದರು.ಒಬ್ಬ ಮಹಿಳೆಯ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಯೋಗ್ಯತೆ ಏನು ಎಂಬುದು ಗೊತ್ತಾಗಿದೆ. ಹೆಣ್ಣನ್ನು ಭಾರತೀಯ ನಾರಿ ಎಂದೆ ಬೊಗಳೆ ಬಿಡುವ ಬಿಜೆಪಿ ನಾಯಕರು, ಹೆಣ್ಣಿನ ಬಗ್ಗೆ ಇವರ ಗೌರವವೂ ಗೊತ್ತಾಗುತ್ತಿದೆ. ನಾನು ಅಧಿಕಾರದಲ್ಲಿರುವುದರಿಂದ ಯಾವ ಪದವನ್ನು ಮಾತನಾಡಬಹುದು ಎಂಬ ಗಂಡಾಳಿಕೆಯ ದಬ್ಬಾಳಿಕೆಯನ್ನು ಸಹಿಸುವುದಿಲ್ಲ ಎಂದು ಅವರು ಕಿಡಿಕಾರಿದರು.ಹಿರಿಯ ರಂಗಕರ್ಮಿಗಳಾದ ಸಿ. ಬಸವಲಿಂಗಯ್ಯ, ಎಚ್. ಜನಾರ್ಧನ್, ಪಿಯುಸಿಎಲ್ ಜಿಲ್ಲಾಧ್ಯಕ್ಷ ಕಮಲ್ ಗೋಪಿನಾಥ್, ಮಾಜಿ ಮೇಯರ್ ಪುರುಷೋತ್ತಮ್, ಒಕ್ಕೂಟದ ಇ. ರತಿರಾವ್, ಹರಿಹರ ಆನಂದಸ್ವಾಮಿ, ಟಿ. ಗುರುರಾಜ್, ಜಿ.ಪಿ. ಬಸವರಾಜು, ಸವಿತಾ ಪ. ಮಲ್ಲೇಶ್, ಅಹಿಂದ ಜವರಪ್ಪ, ಬಾಬುರಾಜ, ಪಿ. ಮರಂಕಯ್ಯ, ಕೆ.ಎಸ್. ಶಿವರಾಮ, ನಾ. ದಿವಾಕರ, ಹೊಸಕೋಟೆ ಬಸವರಾಜ, ಪ್ರೊ. ಪಂಡಿತಾರಾಧ್ಯ, ಮೋಹನ್ ಕುಮಾರ್ ಗೌಡ, ಸಿ. ಹರಕುಮಾರ, ನೆಲೆ ಹಿನ್ನಲೆ ಗೋಪಾಲಕೃಷ್ಣ, ಬಾಲಕೃಷ್ಣ, ದೇವಗಳ್ಳಿ ಸೋಮಶೇಖರ್, ಎಂ.ಎಫ್. ಕಲೀಂ, ಉಗ್ರನರಸಿಂಹೇಗೌಡ, ಪಿ. ರಾಜು, ಕಂಸಾಳೆ ರವಿ ಮೊದಲಾದವರು ಇದ್ದರು.