ಮೈಸೂರು: ರೈತರ ಬಂಧನ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ

| Published : Feb 13 2024, 12:47 AM IST / Updated: Feb 13 2024, 04:19 PM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಸಾನ್ ಮೋರ್ಚಾದಿಂದ ದೆಹಲಿಯಲ್ಲಿ ಫೆ.13 ರಂದು ಪ್ರತಿಭಟನಾ ಸಮಾವೇಶ ಆಯೋಜಿಸಿಸಿದ್ದು, ಮೈಸೂರು ಭಾಗದ 150 ಮಂದಿ ಸೇರಿ ರಾಜ್ಯದಿಂದ 500 ಹೆಚ್ಚು ರೈತರು ತೆರಳಿದ್ದರು. ರೈಲಿನಲ್ಲಿ ತೆರಳುತ್ತಿದ್ದವರನ್ನು ಮಧ್ಯಪ್ರದೇಶ ಪೊಲೀಸರ ಮೂಲಕ ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಂಯುಕ್ತ ಕಿಸಾನ್ ಮೋರ್ಚಾ ಹಮ್ಮಿಕೊಂಡಿರುವ ದೆಹಲಿ ಚಲೋ ಹೋರಾಟದಲ್ಲಿ ಭಾಗವಹಿಸಲು ರಾಜ್ಯದಿಂದ ತೆರಳಿದ್ದ 250 ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮೈಸೂರಿನ ಗನ್ ಹೌಸ್ ಬಳಿ ರಸ್ತೆ ತಡೆದು ಸೋಮವಾರ ಪ್ರತಿಭಟಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಿಸಾನ್ ಮೋರ್ಚಾದಿಂದ ದೆಹಲಿಯಲ್ಲಿ ಫೆ.13 ರಂದು ಪ್ರತಿಭಟನಾ ಸಮಾವೇಶ ಆಯೋಜಿಸಿಸಿದ್ದು, ಮೈಸೂರು ಭಾಗದ 150 ಮಂದಿ ಸೇರಿ ರಾಜ್ಯದಿಂದ 500 ಹೆಚ್ಚು ರೈತರು ತೆರಳಿದ್ದರು. 

ರೈಲಿನಲ್ಲಿ ತೆರಳುತ್ತಿದ್ದವರನ್ನು ಮಧ್ಯಪ್ರದೇಶ ಪೊಲೀಸರ ಮೂಲಕ ಬಂಧಿಸಲಾಗಿದೆ. ಕೆಲವರ ಮೇಲೆ ಹಲ್ಲೆಯೂ ನಡೆದಿದೆ ಎಂದು ಅವರು ಆರೋಪಿಸಿದರು.

ಹಾಗೆಯೇ, ಭೂಪಾಲ್ ರೈಲು ನಿಲ್ದಾಣದಲ್ಲಿ ರೈತರನ್ನು ತಡೆದು ಸಮುದಾಯ ಭವನಗಳಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೀವನದೊಂದಿಗೆ ಆಟವಾಡುತ್ತಿದ್ದಾರೆ. 

ಕೇವಲ ಭಾಷಣದಲ್ಲಿ ರೈತರ ಬಗ್ಗೆ ಕರುಣೆ ವ್ಯಕ್ತಪಡಿಸುವ ಅವರ ದ್ರೋಹದ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ರೈತರು ಸಾಲ ಮನ್ನಾ ಮಾಡುವಂತೆ ಆಗ್ರಹಿಸುವುದು ತಪ್ಪೇ? ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವಂತೆ ಕೇಳುವುದು ಅಪರಾಧವೇ? ಕೇಂದ್ರ ಸರ್ಕಾರ ರೈತರ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. 

ಮಧ್ಯಪ್ರದೇಶ ಪೊಲೀಸರು ನಮ್ಮ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಇದೇ ರೀತಿ ಮುಂದುವರಿದರೆ ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ರಮವಾಗಿ ಬಂಧಿಸಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡಿ, ಹೋರಾಟದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಬೇಕು. ಇಲ್ಲದಿದ್ದರೆ ನಿತ್ಯವೂ ವಿಭಿನ್ನವಾಗಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸಂಚಾರಕ್ಕೆ ಅಡಚಣೆ: ರೈತರು ರಸ್ತೆ ತಡೆಯಿಂದಾಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ರೈತರು ರಸ್ತೆ ಬದಿಯಲ್ಲಿ ಕೆಲಕಾಲ ಪ್ರತಿಭಟಿಸಿ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಮುಖಂಡರಾದ ನೀಲಕಂಠಪ್ಪ ಮಾರ್ಬಳ್ಳಿ, ಸಾತಗಳ್ಳಿ ಬಸವರಾಜ್, ಕಾಟೂರು ಮಹದೇವಸ್ವಾಮಿ, ನಾಗೇಶ್ ವರಕೋಡು, ಮಹದೇವಪ್ಪ, ಗಿರೀಶ್, ಶ್ರೀಕಂಠ, ಮಹೇಶ್, ಅರವಿಂದ ಮೊದಲಾದವರು ಇದ್ದರು.