ಸಾರಾಂಶ
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಹೀಗಾಗಿ ನಮ್ಮ ಹಕ್ಕುಗಳನ್ನು ಕೇಳುವುದಕ್ಕೆ ಹಿಂಜರಿಯಬಾರದು ಎಂದು ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.
ಕನ್ನಡವಾರ್ತೆ ಚವಡಾಪುರ
ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಹೀಗಾಗಿ ನಮ್ಮ ಹಕ್ಕುಗಳನ್ನು ಕೇಳುವುದಕ್ಕೆ ಹಿಂಜರಿಯಬಾರದು ಎಂದು ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ ಹೇಳಿದರು.ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಗ್ರಾಮದ ಸಂಪರ್ಕ ರಸ್ತೆಗಳಿಗಾಗಿ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದ್ದು ಧರಣಿಗೆ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದ ಅವರು ಬಡದಾಳ ಗ್ರಾಮಕ್ಕೆ ಸಂಪರ್ಕಿಸುವ ನಾಲ್ಕು ದಿಕ್ಕಿನ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಡಚಣೆ ಮಾಡುತ್ತಿವೆ. ಜನಸಾಮಾನ್ಯರು ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಗಳಲ್ಲಿ ಜನರ ಜೀವ ಉಳಿಯಲಿದೆ ಎನ್ನುವ ನಂಬಿಕೆ ಈಗ ಊರವರಲ್ಲಿ ಇಲ್ಲದಂತಾಗಿದೆ. ತಾಲೂಕಿನಲ್ಲಿ ಬಡದಾಳ ಗ್ರಾಮದಷ್ಟು ದಯನೀಯ ಸೌಲಭ್ಯ ವಂಚಿತ ಊರು ಇನ್ನೊಂದಿಲ್ಲ ಎಂದ ಅವರು ಗ್ರಾಮಸ್ಥರು ಒಗ್ಗಟ್ಟು ಪ್ರದರ್ಶನ ಮಾಡಿದರೆ ನಿಮ್ಮ ಹಕ್ಕುಗಳು ಬೇಗ ಸಿಗಲಿವೆ. ಗ್ರಾಮಸ್ಥರೇ ಒಡಕು ಪ್ರದರ್ಶನ ಮಾಡಿದರೆ ಆಳುವ ದೊರೆಗಳಿಗೆ ಕೇಳುವವರಿಲ್ಲದಂತಾಗಲಿದ್ದು ನೀವು ಇನ್ನೂ ಅನೇಕ ವರ್ಷಗಳ ಕಾಲ ಸೌಲಭ್ಯ ವಂಚಿತರಾಗುತ್ತೀರಿ ಎಂದು ಎಚ್ಚರಿಸಿದರು.
ನಾಗರಿಕ ಹೋರಾಟ ವೇದಿಕೆಯ ಪ್ರಮುಖರಾದ ಭೀಮಾಶಂಕರ ಖೈರಾಟ, ಈರಣ್ಣ ಶಂಕರಶೆಟ್ಟಿ, ಶರಣಗೌಡ ಪೊಲೀಸಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಯುವಕರು, ಹಿರಿಯರು ಇದ್ದರು.