ಉಪ ಲೋಕಾಯುಕ್ತರಿಂದ ವಸತಿ ನಿಲಯ ಪರಿಶೀಲನೆ

| Published : Mar 04 2024, 01:20 AM IST

ಸಾರಾಂಶ

ವಸತಿ ನಿಲಯಕ್ಕೆ ಕಾಲಕಾಲಕ್ಕೆ ಸರಿಯಾಗಿ ವೈದ್ಯರು ಭೇಟಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲು ಲೋಕಾಯುಕ್ತ ಎಸ್‌ಪಿಗೆ ದಿಢೀರ್ ಭೇಟಿ ನೀಡಲು ಸೂಚಿಸಲಾಗಿದೆ

ಕಾರವಾರ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಭಾನುವಾರ ನಗರದ ಬಾಡದಲ್ಲಿರುವ ವಸತಿ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ, ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದರು.

ಊಟ, ತಿಂಡಿ ನೀಡುವ ಸಮಯ, ಸ್ವಚ್ಛತೆ ಒಳಗೊಂಡು ಮೂಲಭೂತ ವ್ಯವಸ್ಥೆಗಳ ಬಗ್ಗೆ ಬಾಲಕಿಯರೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು. ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಒಂದು ಕೊಠಡಿಯಲ್ಲಿ ೧೮ ವಿದ್ಯಾರ್ಥಿನಿಯರು ಇರುವುದನ್ನು ಗಮನಿಸಿದ ನ್ಯಾಯಮೂರ್ತಿ ಫಣೀಂದ್ರ ಉಳಿದುಕೊಳ್ಳಲು ಸಮಸ್ಯೆ ಆಗುವುದಿಲ್ಲವೇ? ಹೇಗೆ ಮಲುಗುತ್ತೀರಿ ಎಂದು ಪ್ರಶ್ನಿಸಿದರು.

ಬಿಸಿಎಂ ಜಿಲ್ಲಾ ಅಧಿಕಾರಿ ಸತೀಶ ಮಾತನಾಡಿ, ಮತ್ತೊಂದು ವಸತಿ ನಿಲಯವು ಸರ್ಕಾರಿ ಎಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಬಳಕೆ ಮಾಡಿಕೊಳ್ಳುತ್ತಿದ್ದರು. ಈಗ ಅವರಿಗೆ ಮಾಜಾಳಿ ಎಂಜನಿಯರಿಂಗ್ ಕಾಲೇಜಿನ ಬಳಿಯೇ ವಸತಿ ನಿಲಯ ವ್ಯವಸ್ಥೆಯಾಗಿದ್ದು, ಅವರು ಬಳಸುತ್ತಿದ್ದ ವಸತಿ ನಿಲಯ ಇಲಾಖೆಯ ಬಳಕೆಗೆ ಸಿಗುತ್ತದೆ.ಅಲ್ಲಿಗೆ ಈ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಸ್ಥಳಾಂತರಿಸುತ್ತೇವೆ ಎಂದರು. ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸುವಂತೆ ಉಪ ಲೋಕಾಯುಕ್ತರು ಸೂಚಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ವಸತಿ ನಿಲಯಕ್ಕೆ ಕಾಲಕಾಲಕ್ಕೆ ಸರಿಯಾಗಿ ವೈದ್ಯರು ಭೇಟಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಲು ಲೋಕಾಯುಕ್ತ ಎಸ್‌ಪಿಗೆ ದಿಢೀರ್ ಭೇಟಿ ನೀಡಲು ಸೂಚಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ, ವ್ಯಕ್ತಿತ್ವ ವಿಕಸನ ಇತ್ಯಾದಿ ಬಗ್ಗೆ ವಿದ್ಯಾರ್ಥಿನಿಯರಿಗೆ ಕಾರ್ಯಾಗಾರ ನಡೆಸಲು ಹೇಳಿದ್ದೇವೆ. ಉಳಿದಂತೆ ವಸತಿ ನಿಲಯದಲ್ಲಿ ವ್ಯವಸ್ಥೆ ಉತ್ತಮವಾಗಿದೆ ಎಂದರು.

ಶನಿವಾರ ಡಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ೬೫ ದೂರು ಸ್ವೀಕರಿಸಿ, ಸಂಸ್ಥೆ ವ್ಯಾಪ್ತಿಯಲ್ಲಿ ಇರುವ ೨೬ ನೋಂದಣಿ ಮಾಡಿಕೊಳ್ಳಲಾಗಿದೆ. ಉಳಿದ ಪ್ರಕರಣವನ್ನು ಸಂಬಂಧಿಸಿದವರಿಗೆ ವರ್ಗಾವಣೆ ಮಾಡಲಾಗಿದೆ. ಖಾತೆ, ಪಹಣಿ ಬದಲಾವಣೆ, ರಸ್ತೆ ಒತ್ತುವರಿ, ಅತಿಕ್ರಮಣ ಕಟ್ಟಡ ಒಳಗೊಂಡು ವಿವಿಧ ದೂರು ಬಂದಿದೆ. ಸೋಮವಾರ ಕೂಡಾ ದೂರು ಸ್ವೀಕರಿಸುವ ಕಾರ್ಯಕ್ರಮವಿದ್ದು, ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ರೇಣುಕಾ ರಾಯ್ಕರ, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್.ವಿಷ್ಣುವರ್ಧನ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ಮೊದಲಾದವರು ಇದ್ದರು.