ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
2ಎ ಮೀಸಲಾತಿಗಾಗಿ ಅನೇಕ ಹೋರಾಟ ಮಾಡಿದರೂ ಸರಕಾರಗಳು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಮೀಸಲಾತಿ ಜಾರಿ ಮಾಡದೇ ಇದ್ದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯಂಜಯ ಸ್ವಾಮೀಜಿ ಹೇಳಿದರು.ಹುಣಸಗಿ ಪಟ್ಟಣದ (ಮಹಾಂತಸ್ವಾಮಿ ವೃತ್ತ) ದೇವಾಪುರ-ಮನಗೂಳಿ ರಾಜ್ಯ ಹೆದ್ದಾರಿ ತಡೆದು ಪಂಚಮಸಾಲಿ ಸಮುದಾಯವ ಇಷ್ಟಲಿಂಗ ಪೂಜೆದೊಂದಿಗೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಈ ದೇಶದ ಇತಿಹಾಸದಲ್ಲಿ ಲಿಂಗವನ್ನು ಬೀದಿಗೆ ತಂದು ಯಾರೂ ಪ್ರತಿಭಟನೆ ಮಾಡಿಲ್ಲ. ಸದ್ಯ 2ಎ ಮೀಸಲಾತಿಗಾಗಿ ಪಂಚಾಮಸಾಲಿ ಸಮುದಾಯ ರಸ್ತೆ ತಡೆದು ಲಿಂಗ ಪೂಜೆ ಮಾಡಿ ಹೋರಾಟಕ್ಕೆ ಇಳಿಯಬೇಕಾಗಿದೆ. ನಮ್ಮ ಸಮುದಾಯ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಯಾವ ಸರ್ಕಾರ ಕೂಡ ನಮ್ಮ ಹೋರಾಟದ ಕಡೆ ಗಮನಹರಿಸುತ್ತಿಲ್ಲ. 2ಎ ಮೀಸಲಾತಿ ಜಾರಿ ಮಾಡದೇ ಇದ್ದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಪಂಚಮಸಾಲಿ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ಸರಕಾರಕ್ಕೆ ಎಚ್ಚರಿಸಿದರು.ಬಿಜೆಪಿ ಸರಕಾರವು ಕೂಡ ಜಾರಿ ವಿಷಯವಾಗಿ ಭರವಸೆ ನೀಡಿತ್ತಾದರೂ ಅದು ಕೂಡ ನಮ್ಮ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಮಾಡಿತು. ಹೀಗಾಗಿ ಪಂಚಮಸಾಲಿ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. 2ಎ ಮೀಸಲಾತಿ ಜಾರಿಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಲಕ್ಷ್ಯ ವಹಿಸಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ಸಮುದಾಯದ ಬೇಡಿಕೆಗಳಿಗೆ ರಾಜಕೀಯ ಪ್ರತಿನಿಧಿಗಳು ಸದನದೊಳಗೆ ಧ್ವನಿ ಎತ್ತಬೇಕು. ಆದರೆ, ಇದ್ಯಾವುದೂ ಜನಪ್ರತಿನಿಧಿಗಳಿಂದ ಆಗುತ್ತಿಲ್ಲ. ಪಂಚಮಸಾಲಿ ಸಮುದಾಯದ ಮತಗಳನ್ನು ಪಡೆದು ಸಮುದಾಯಕ್ಕೆ ಒಂದು ರೀತಿ ಅನ್ಯಾಯ ಮಾಡುತ್ತಿದ್ದು, ನಾಚಿಕೆಗೇಡಿನ ಸಂಗತಿ. ಕೂಡಲೇ ಅಧಿಕಾರ ಹಿಡಿದ ಜನಪ್ರತಿನಿಧಿಗಳು 2ಎ ಮೀಸಲಾತಿ ದೊಕಿಸಿಕೊಡಲು ಮುತುವರ್ಜಿ ವಹಿಸಬೇಕು. ಕಾನೂನು ತೊಂದರೆ ಎದುರಾದರೆ ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿಯಾದರೂ ಸೇರಿಸಲು ಕ್ರಮಕೈಗೊಳ್ಳಬೇಕು ಎಂದು ಖಡಕ್ಕಾಗಿ ತಿಳಿಸಿದರು.ಮುಖಂಡ ಚಂದ್ರಶೇಖರ ಸಾಹುಕಾರ ದಂಡಿನ ಮಾತನಾಡಿ, 2ಎ ಮೀಸಲಾತಿಗಾಗಿ ಬಸವಜಯ ಮೃತ್ಯಂಜಯ ಸ್ವಾಮೀಜಿ ಅವರ ಹೋರಾಟಕ್ಕೆ ಸಮುದಾಯ ಸದಾ ಬೆಂಬಲಕ್ಕೆ ನಿಲ್ಲುತ್ತದೆ. ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಗೆ ಮೀಸಲಾತಿ ಅನಿವಾರ್ಯವಾಗಿದೆ. ಇದಕ್ಕೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಇದಕ್ಕೂ ಮುನ್ನ ಸಮುದಾಯದೊಂದಿಗೆ ಬಸವೇಶ್ವರ ವೃತ್ತದಿಂದ ಮಹಾಂತಸ್ವಾಮಿ ವೃತ್ತದವರೆಗೂ ಪಾದಯಾತ್ರೆ ನಡೆಸಿ 2ಎ ಹಕ್ಕಿಗಾಗಿ ಜೈಗೋಷಣೆ ಹಾಕಲಾಯಿತು. ನಂತರ ಸಿಎಂಗೆ ಬರೆದ ಮನವಿಯನ್ನು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಸಲ್ಲಿಸಲಾಯಿತು.ಈ ವೇಳೆ ರಸ್ತೆ ತಡೆಯಿಂದಾಗಿ ಕೆಲವೊತ್ತು ಸಂಚಾರಕ್ಕೆ ವ್ಯತ್ಯಾಯ ಉಂಟಾಗಿ ಪ್ರಯಾಣಿಕರು ಪರಿತಪಿಸುವಂತಾಯಿತು. ಪಿಎಸ್‌ಐ ಸಂಗೀತಾ ಶಿಂಧೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.
ಪಂಚಮಸಾಲಿ ಪಂಚಸೇನೆಯ ರಾಜ್ಯಾಧ್ಯಕ್ಷ ರುದ್ರಗೌಡ ಸೊಲಬಗೌಡರ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ್, ಅಮರಣ್ಣ ದೇಸಾಯಿ, ಬಸವರಾಜ ಮಲಗಲದಿನ್ನಿ, ಸಿದ್ದಣ್ಣ ಸಾಹುಕಾರ ಮಲಗಲದಿನ್ನಿ, ವಿರೇಶ ಸಾಹುಕಾರ ಚಿಂಚೋಳಿ, ಶರಣು ಸಾಹುಕಾರ ದಂಡಿನ, ಸಂಗಣ್ಣ ವೈಲಿ, ಸಿದ್ರಾಮಪ್ಪ ಮುದಗಲ್, ಮುರಿಗೆಣ್ಣ ದೇಸಾಯಿ, ಹೊನ್ನಕೇಶವ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ಸಿದ್ದನಗೌಡ ಬಿರಾದಾರ್ ಇತರರಿದ್ದರು.