ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕುಟುಂಬ ರಾಜಕಾರಣ ಪೋಷಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನ ಸ್ವಾರ್ಥ ರಾಜಕಾರಣ ನಂಬಬಾರದು ಎಂದು ಕೆಆರ್‌ಎಸ್ ಪಕ್ಷದ ರವಿ ಕೃಷ್ಣಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದಿಂದ ನಡೆಯುತ್ತಿರುವ ಬೈಕ್ ಜಾಥಾ ನೆಲಮಂಗಲ ತಲುಪಿದ ಹಿನ್ನೆಲೆಯಲ್ಲಿ ಬಸವಣ್ಣ ಮಠದ ಮೈದಾನದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಸಿಬಿ ಪಕ್ಷಗಳಲ್ಲಿ ಭ್ರಷ್ಟತೆ, ಸ್ವಜನ ಪಕ್ಷಪಾತ, ಅನೈತಿಕ ನಡವಳಿಕೆ, ಸಮಾಜಘಾತುಕ ಶಕ್ತಿ, ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ.
ಈ ಮೂಲಕ ಪ್ರಜಾಪ್ರಭುತ್ವದ ಆಶಯ ಮಣ್ಣುಪಾಲಾಗುತ್ತಿದೆ. ಇಂತವರನ್ನು ರಾಜಕೀಯ ನಾಯಕರೆಂದು ಒಪ್ಪಿಕೊಳ್ಳದೆ ಜನಪರ ಕಾಳಜಿಯ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.
ಬಸವಣ್ಣ ಮಠದ ಮೈದಾನದಲ್ಲಿ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಜನತೆಯಲ್ಲಿ ರಾಜಕೀಯ ಪಕ್ಷಗಳ ಭ್ರಷ್ಟತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಸ್ವಚ್ಛ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ‘ಕರ್ನಾಟಕಕ್ಕಾಗಿ ನಾವು’ ಎನ್ನುವ ಹೆಸರಿನಲ್ಲಿ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದ್ದಾಗಿ ತಿಳಿಸಿದರು.
ಬೈಕ್ ಜಾಥಾದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ, ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ರಘುಪತಿ ಭಟ್, ಸಂಘಟನಾ ಕಾರ್ಯದರ್ಶಿ ಎಲ್.ಜೀವನ್ ಇದ್ದರು.
ಕಳೆದ ಫೆ.19ರಂದು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಪ್ರಾರಂಭವಾದ ಬೈಕ್ ಜಾಥಾ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ರಾಮನಗರ ಮೂಲಕ, ಮಂಡ್ಯ, ಚಾಮರಾಜನಗರ, ಮೈಸೂರು ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಹಾದು ನೆಲಮಂಗಲ ತಲುಪಿತು.