ರಾಜ್ಯದ ಪ್ರತಿ ಕ್ಷೇತ್ರಕ್ಕೆ 3 ಹೆಸರು ದಿಲ್ಲಿಗೆ ಕಳಿಸಲು ಬಿಜೆಪಿ ನಿರ್ಧಾರ

| Published : Mar 04 2024, 01:20 AM IST / Updated: Mar 04 2024, 09:24 AM IST

bjp emblem flag logo
ರಾಜ್ಯದ ಪ್ರತಿ ಕ್ಷೇತ್ರಕ್ಕೆ 3 ಹೆಸರು ದಿಲ್ಲಿಗೆ ಕಳಿಸಲು ಬಿಜೆಪಿ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಮುಂದಿನ ವಾರದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದ್ದು, ಇದರಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ನಿರೀಕ್ಷೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಮುಂದಿನ ವಾರದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಯಿದ್ದು, ಇದರಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಚುನಾವಣಾ ನಿರ್ವಹಣಾ ಸಮಿತಿ ಸಭೆ ಮತ್ತು ಕೋರ್ ಕಮಿಟಿ ಸಭೆ ನಡೆದಿದ್ದು, ಪ್ರತಿ ಕ್ಷೇತ್ರದಿಂದ ಮೂರು ಹೆಸರುಗಳನ್ನು ಅಂತಿಮಗೊಳಿಸಿರುವ ಸಂಭಾವ್ಯರ ಪಟ್ಟಿಯನ್ನು ಎರಡು ಅಥವಾ ಮೂರು ದಿನಗಳಲ್ಲಿ ಹೈಕಮಾಂಡ್‌ಗೆ ರವಾನಿಸಲು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಇಬ್ಬರು ವೀಕ್ಷಕರನ್ನು ಕಳುಹಿಸಲಾಗಿತ್ತು. 

ಕಳೆದ ಮೂರ್ನಾಲ್ಕು ದಿನಗಳಿಂದ ಎಲ್ಲಾ ಕ್ಷೇತ್ರಗಳಲ್ಲಿನ ಅಭಿಪ್ರಾಯ ಸಂಗ್ರಹಿಸಿರುವ ವೀಕ್ಷಕರು ನೀಡಿದ ಹೆಸರುಗಳನ್ನು ಸಭೆ ಮುಂದೆ ಇರಿಸಲಾಯಿತು. 

ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ಬಗ್ಗೆ ವಿವರವಾಗಿ ಚರ್ಚೆಯಾಗಿದೆ. ಎರಡು ಅಥವಾ ಮೂರು ದಿನಗಳಲ್ಲಿ ದೆಹಲಿ ವರಿಷ್ಠರಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಕಳುಹಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಬೇಕು. 28 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿ ಗೆಲ್ಲಲು ಒಳ್ಳೆಯ ಅವಕಾಶ ಇದ್ದು, ಗೆದ್ದು ಹೊಸ ದಾಖಲೆ ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆ. 

ಪಟ್ಟಿ ಕಳುಹಿಸಿದ ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಿಯವರು ಕುಳಿತು ಅಂತಿಮಗೊಳಿಸುತ್ತಾರೆ. ನಂತರ ಪಟ್ಟಿ ಬಿಡುಗಡೆ ಆಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮಾಜಿ ಸಚಿವ ಸಿ.ಟಿ.ರವಿ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಸ್ಥಾನ ಹಂಚಿಕೆ ಇತ್ಯರ್ಥಗೊಳ್ಳಬೇಕಿದ್ದು, ಶೀಘ್ರ ಈ ಪ್ರಕ್ರಿಯೆಗೆ ಚಾಲನೆ ಸಿಗುವ ನಿರೀಕ್ಷೆಯಿದೆ. 

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಿಂದ ಐದು ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವ ಬಗ್ಗೆ ಜೆಡಿಎಸ್ ನಾಯಕರು ನಿರೀಕ್ಷೆ ಹೊಂದಿದ್ದಾರೆ. 

ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ನಾಯಕರ ಬಳಿ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. ಇದೀಗ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುವ ಮುನ್ನ ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎಂಬುದು ಅಂತಿಮಗೊಳ್ಳಬೇಕಾಗಿದೆ. 

ಇದೇ ವಾರದಲ್ಲಿ ಹಂಚಿಕೆ ಸಂಬಂಧ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆಯಬಹುದು ಎನ್ನಲಾಗುತ್ತಿದೆ.