ಸಾರಾಂಶ
ಅಂತರ್ ಶಾಲಾ ಮುಕ್ತ ಚೆಸ್ ಪಂದ್ಯಾವಳಿಕನ್ನಡಪ್ರಭ ವಾರ್ತೆ ಹಾಸನ
ಚೆಸ್ ಆಟ ಎಂದರೇ ಸ್ಪರ್ಧೆಯಲ್ಲಿ ಭಾಗವಹಿಸುವವರಲ್ಲಿ ಮನಸ್ಸಿನ ಏಕಾಗ್ರತೆ ಅತಿಮುಖ್ಯವಾಗಿದ್ದು, ಅವಕಾಶದ ಜೊತೆಗೆ ಮುಂದಿನ ಪೀಳಿಗೆಗೂ ಈ ಕ್ರೀಡೆಯು ಉಳಿಯಲಿ ಎನ್ನುವ ಉದ್ದೇಶದಲ್ಲಿ ಇಂತಹ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ರಾಯಲ್ ಅಪೋಲೋ ಅಂತರ್ ರಾಷ್ಟ್ರೀಯ ಶಾಲೆ ಪ್ರಾಂಶುಪಾಲ ಡಾ. ಎಲ್.ಪಿ.ರವಿಕುಮಾರ್ ಅಭಿಪ್ರಾಯಪಟ್ಟರು.ನಗರದ ಚಿಕ್ಕಕೊಂಡಗುಳದ ಬಳಿ ವಿಶ್ವೇಶ್ವರಯ್ಯ ನಗರದಲ್ಲಿರುವ ರಾಯಲ್ ಅಪೋಲೋ ಅಂತಾರಾಷ್ಟ್ರೀಯ ಶಾಲೆ ಸಭಾಂಗಣದಲ್ಲಿ ಕದಂಬ ಚೆಸ್ ಅಕಾಡೆಮಿ ಹಾಗೂ ರಾಯಲ್ ಅಪೋಲೋ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೫ನೇ ಅಂತರ್ ಶಾಲಾ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನು ಚೆಸ್ ಆಟ ಆಡುವುದರ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ನಮ್ಮ ಶಾಲೆಯಲ್ಲಿ ಕದಂಬ ಚೆಸ್ ಅಕಾಡೆಮಿಯಿಂದ ಚೆಸ್ ಕ್ರೀಡೆ ಏರ್ಪಡಿಸಿ ಅವಕಾಶ ನೀಡಿರುವುದಕ್ಕೆ ಮೊದಲು ಅಭಿನಂದನೆಯನ್ನು ತಿಳಿಸುತ್ತೇನೆ. ಕ್ರೀಡೆ ಎಂದರೆ ಈ ಆಟದಲ್ಲಿ ತರಬೇತಿ ಜತೆಗೆ ಏಕಾಗ್ರತೆ ಇರಬೇಕು. ಸೋತರೂ ಕಲಿಯುವ ಉತ್ಸಾಹದಿಂದ ಸೋಲನ್ನು ಸವಾಲಾಗಿ ಸ್ವೀಕರಿಸಿದರೆ ಮುಂದೆ ಗೆಲುವಿನ ಮೆಟ್ಟಿಲು ನಿಮ್ಮದಾಗುತ್ತದೆ. ಗೆಲುವು ಬಂದಾಗ ಬೀಗದೇ ಸಮಧಾನವಾಗಿ ಸ್ವೀಕರಿಸಬೇಕು. ಇಂತಹ ಆಟವನ್ನು ಆಡುವುದರಿಂದ ಮಾನಸಿಕವಾಗಿ ಸಮತೋಲನ ಕಾಪಾಡಿಕೊಳ್ಳಬಹುದು. ಚೆಸ್ ಆಟದಲ್ಲಿ ಅನೇಕರು ಸಾಧನೆ ಮಾಡಿದ್ದು, ಯಾವ ಆಟವಾಗಿರಲಿ ಶ್ರದ್ಧೆ ಇರಬೇಕು. ಅದರಲ್ಲೂ ಇಂತಹ ಚೆಸ್ ಕ್ರೀಡೆಯು ಮಕ್ಕಳ ಬುದ್ದಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.ಈ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಪ್ರಯತ್ನ ಅಗತ್ಯವಿದ್ದು, ಅದರಲ್ಲಿ ಮಕ್ಕಳ ಮೆದುಳನ್ನು ಚುರುಕುಗೊಳಿಸಲು ಚೆಸ್ ಆಟ ಅತ್ಯಂತ ಪರಿಣಾಮಕಾರಿಯಾಗಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕದಂಬ ಚೆಸ್ ಅಕಾಡೆಮಿ ವೆಬ್ಸೈಟ್ ಅನ್ನು ಲಾಂಚ್ ಮಾಡಲಾಯಿತು.ಜನಮಿತ್ರ ಕನ್ನಡ ದಿನಪತ್ರಿಕೆ ಸಂಪಾದಕ ನವೀನ್ ಕುಮಾರ್, ಕದಂಬ ಚೆಸ್ ಅಕಾಡೆಮಿ ಸಂಸ್ಥಾಪಕ ಎಂ.ಟಿ. ತ್ಯಾಗರಾಜ್, ಹಾಸನ ಜಿಲ್ಲಾ ಚೆಸ್ ಅಸೋಸಿಯೇಶನ್ ಅಧ್ಯಕ್ಷೆ ರಶ್ಮಿ ಕಿರಣ್, ಅಸೋಸಿಯೇಶನ್ ಖಜಾಂಚಿ ವಿ.ಜಿ.ಎಂ. ಪ್ರತಾಪ್, ಜಿಲ್ಲಾ ಚೆಸ್ ಅಸೋಸಿಯೇಶನ್ ಉಪಾಧ್ಯಕ್ಷ ಎ.ಮಂಜುನಾಥ್ ಪ್ರಸಾದ್, ಸದಸ್ಯರಾದ ಆರ್. ರಾಧಾ ಜಗದೀಶ್, ಉಪಾಧ್ಯಕ್ಷ ಎಂ.ಎನ್. ಹರೀಶ್ ಕುಮಾರ್, ಕದಂಬ ಚೆಸ್ ಅಕಾಡೆಮಿ ಟ್ರೈನರ್ ಕಾವ್ಯಚಂದನ್ ಇದ್ದರು.ಚೆಸ್ ಆಡುವ ಮೂಲಕ ೫ನೇ ಅಂತರ್ ಶಾಲಾ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯನ್ನುರಾಯಲ್ ಅಪೋಲೋ ಅಂತಾರಾಷ್ಟ್ರೀಯ ಶಾಲೆ ಪ್ರಾಂಶುಪಾಲ ಡಾ. ಎಲ್.ಪಿ. ರವಿಕುಮಾರ್ ಉದ್ಘಾಟಿಸಿದರು.