ಸಾರಾಂಶ
ಕಮಲನಗರದಲ್ಲಿ 3 ಎಕ್ಸ್‌ಪ್ರೆಸ್ ರೈಲು ನಿಲುಗಡೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಅದರಂತೆ ಲಾತೂರ-ಯಶವಂತಪೂರ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಸಂಸದ ಭಗವಂತ ಖೂಬಾ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಕಮಲನಗರ
ಕಳೆದ 10 ವರ್ಷಗಳಲ್ಲಿ ಸಂಸದರಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸ್ವಚ್ಛ, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.ಪಟ್ಟಣದ ರೇಲ್ವೆ ನಿಲ್ದಾಣದಲ್ಲಿ ಶನಿವಾರ ಸಂಜೆ ಲಾತೂರ-ಯಶವಂತಪೂರ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಕಮಲನಗರ ಗಡಿಭಾಗದ ತಾಲೂಕು ಕೇಂದ್ರವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಾರೆ. ಈ ಹಿನ್ನೆಲೆ 3 ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಇಲಾಖೆ ಒಪ್ಪಿಗೆ ನೀಡಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಜನರಲ್ಲಿ ವಿಶ್ವಾಸದ ಜೊತೆಗೆ ದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ ಎಂದರು.
ಬೀದರ್‌ನಿಂದ 13 ಹೊಸ ರೈಲು ಸಂಚಾರ ಮತ್ತು 12 ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ಸಾಗುತ್ತಿವೆ ಎಂದು ತಿಳಿಸಿದರು.ಕಮಲನಗರ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ 30 ಕೋಟಿ ವೆಚ್ಚದಲ್ಲಿ ಗ್ರಿಡ್ ಪವರ್ ಸ್ಟೇಷನ್ ಸ್ಥಾಪಿಸಲಾಗುತ್ತಿದೆ. ಇದಲ್ಲದೇ ಹಂದಿಕೇರಾ ಕ್ರಾಸ್ ಬಳಿ 2000 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ ಅನುಮೋದನೆ ದೊರಕಿದೆ. 10 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಮುಂದಾಗಿವೆ. ಇದರಿಂದ 1500ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ದೊರಕಲಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಮಹೇಶ, ಮುಖಂಡರಾದ ಪ್ರಕಾಶ ಟೋಣ್ಣೆ, ಬಾಲಾಜಿ ತೇಲಂಗ, ಶ್ರೀರಂಗ ಪರಿಹಾರ, ಸಿಕಿಂದ್ರಾಬಾದ ವಿಬಾಗದ ಎಡಿಆರ್ ಗೋಪಾಲ ಸೇರಿ ಇಲಾಖೆ ಹಿರಿಯ ಅಧಿಕಾರಿ ಮತ್ತು ಸಿಬ್ಬಂಧಿ ಇದ್ದರು.