ರಾಜ್ಯದ ಎಲ್ಲ ಸಾರ್ವಜನಿಕ ಗ್ರಂಥಾಲಯ ಡಿಜಿಟಲೀಕರಣ

| Published : Mar 04 2024, 01:20 AM IST

ರಾಜ್ಯದ ಎಲ್ಲ ಸಾರ್ವಜನಿಕ ಗ್ರಂಥಾಲಯ ಡಿಜಿಟಲೀಕರಣ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಿದ ಹೆಮ್ಮೆ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಿದ ಹೆಮ್ಮೆ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶಕುಮಾರ ಹೊಸಮನಿ ತಿಳಿಸಿದರು.

ನಗರದ ಎಸ್‌.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ನಾಡಹಬ್ಬ ಉತ್ಸವ ಸಮಿತಿ ಬೆಳಗಾವಿ ಹಾಗೂ ಪ್ರಹ್ಲಾದ ಪ್ರಕಾಶನ ಬೆಳಗಾವಿ ಇವರ ನೇತೃತ್ವದಲ್ಲಿ ಡಾ.ಸಿ.ಕೆ.ಜೋರಾಪೂರ ಅವರು ಬರೆದ “ಕರ್ನಾಟಕದ ಇತಿಹಾಸ - ಒಂದು ಇಣುಕು ನೋಟ” ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಹೊರತುಪಡಿಸಿ ದೇಶದ ಯಾವುದೇ ರಾಜ್ಯದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಡಿಜಿಟಲೀಕರಣ ಮಾಡಿರುವ ನಿದರ್ಶನಗಳಿಲ್ಲ. ಅಲ್ಲದೇ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿರುವ ಗ್ರಂಥಾಲಯಗಳನ್ನು ಸಂಪೂರ್ಣ ಡಿಜಿಟಲ್‌ ಮಾಡಲಾಗಿದೆ ಎಂದು ತಿಳಿಸಿದರು.

ಪೋಷಕರು ಮೊದಲು ಕೈಯಲ್ಲಿ ಪುಸ್ತಕ ಹಿಡಿದರೆ ಮಕ್ಕಳು ಅದೇ ಸಂಸ್ಕೃತಿಯನ್ನು ಅಳವಡಿಸಿಕೊಂಡು ಪುಸ್ತಕ, ಓದು, ಬರವಣಿಗೆಯತ್ತ ಆಸಕ್ತಿ ಹೊಂದುತ್ತಾರೆ. ಆದರೆ ಇತ್ತೀಚಿಗೆ ಮನೆಯಲ್ಲಿ ದೊಡ್ಡವರು ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವ ಸಮಯ ಮತ್ತು ಹೊಂದಿರುವ ಆಸಕ್ತಿಯನ್ನು ಪುಸ್ತಕದ ಮೇಲೆ ಹೊಂದಿಲ್ಲ ಇರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ತೊಂಟದಾರ್ಯ ಜಗದ್ಗುರು ಡಾ. ಸಿದ್ಧರಾಮ ಸ್ವಾಮೀಜಿ ಹಾಗೂ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಹೆಚ್‌. ಬಿ. ರಾಜಶೇಖರ, ರಾಜಕೀಯ ಧುರೀಣರಾದ ಎಂ.ಬಿ. ಝಿರಲಿ, ಮಹಾಂತೇಶ ಒಕ್ಕುಂದ ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ರಾಧಾ.ಬಿ.ಆರ್‌ ಅವರು, ಕೃತಿ ಪರಿಚಯದಲ್ಲಿ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದದ ಮೌರ್ಯರು, ಶಾತವಾಹನರು, ಕದಂಬ-ಗಂಗರು, ವಾತಾಪಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರ್ಯರು, ಹೊಯ್ಸಳರು, ಸೇವುಣರು, ವಿಜಯನಗರ ಅರಸರು, ಬಹಮನಿ ಸುಲ್ತಾನರು, ಮೈಸೂರು ಯಲಹಂಕದ ಪ್ರಭುಗಳು, ಕೆಳದಿ ನಾಯಕರು, ಚಿತ್ರದುರ್ಗದ ನಾಯಕರು, ಬೆಳವಡಿ ಮಲ್ಲಮ್ಮ, ಕಿತ್ತೂರ ಸಂಸ್ಥಾನದ ಕಲಿಗಳು ಹೀಗೆ ಇವೆಲ್ಲವುಗಳನ್ನೊಳಗೊಂಡ ಇತಿಹಾಸದ ಕೃತಿಯು ಸಮಗ್ರವಾಗಿ ಉಲ್ಲೇಖ ಮಾಡಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಆರ್‌.ಪಿ.ಪಾಟೀಲ, ಬಾಸೂರ ತೀಪ್ಪೆಸ್ವಾಮಿ, ಬಸವರಾಜ ಗಾರ್ಗಿ, ಅನ್ನಪೂರ್ಣ ಹಿರೇಮಠ, ಮಧುಕರ ಗುಂಡೇನಟ್ಟಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

----

ಕೋಟ್‌

ಎಲ್ಲರೂ ಮೊಬೈಲ್‌ಗಳ ಬಳಕೆ ಆದಷ್ಟು ಕಡಿಮೆ ಮಾಡಿ, ಓದುವ ಹವ್ಯಾಸ ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಗ್ರಂಥಾಲಯದಲ್ಲಿ ಎಲ್ಲರೂ ಚಂದಾದಾರರಾಗಿ, ಚಂದಾದಾರರಾಗಲು ಯಾವುದೇ ಶುಲ್ಕ ಇರುವುದಿಲ್ಲ. ಸಂಪೂರ್ಣವಾಗಿ ಉಚಿತವಾಗಿರುತ್ತದೆ.

-ಡಾ. ಸತೀಶಕುಮಾರ ಹೊಸಮನಿ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ