ಸಾರಾಂಶ
ಮಗುವಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟನೆ । ಹಾಸನದಲ್ಲಿರುವ ೧,೧೭,೩೬೧ ಮಕ್ಕಳಿಗೆ ಲಸಿಕೆ ಹಾಕುವ ಗುರಿ । ಮೂರು ದಿನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಹಾಸನನಗರದ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಶಾಸಕ ಎಚ್.ಪಿ. ಸ್ವರೂಪ್ ಮಗುವಿಗೆ ಪೊಲಿಯೋ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಇದೇ ವೇಳೆ ಹಿಮ್ಸ್ ನಿರ್ದೇಶಕ ಡಾ. ಎಸ್.ವಿ. ಸಂತೋಷ್ ಮಾತನಾಡಿ, ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಇನ್ನೂ ಮೂರು ದಿನಗಳ ಕಾಲ ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕಲಾಗುತ್ತದೆ. ಇದು ಹೆಚ್ಚು ಸಾಂಕ್ರಾಮಿಕ ವೈರಲ್ ಸೋಂಕು ಆಗಿದ್ದು, ಪ್ರಾಥಮಿಕವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ರಕ್ಷಿಸುವಲ್ಲಿ, ದುರ್ಬಲಗೊಳಿಸುವ ರೋಗ ಮತ್ತು ಪೊಲಿಯೋ ಪ್ರತಿರಕ್ಷಣೆ ಒದಿಗಿಸುತ್ತದೆ ಎಂದರು.ಹಿಮ್ಸ್ ಸಹಾಯಕ ನಿರ್ದೇಶಕಿ ಡಾ. ರಾಜೇಶ್ವರಿ ಮಾತನಾಡಿ, ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ಕೆಲವು ದೇಶಗಳಲ್ಲಿ ಪೋಲಿಯೋ ಇನ್ನೂ ಭೀತಿಯನ್ನುಂಟು ಮಾಡುತ್ತಿದ್ದು, ದೇಶದಲ್ಲೂ ಮಾರುಕಳಿಸುವ ಸಾಧ್ಯತೆಯಿದೆ. ಪ್ರತಿ ಬಾರಿಯೂ ಎರಡು ಹನಿ ಲಸಿಕೆ ನಿಮ್ಮ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸುತ್ತದೆ. ಮಾರ್ಚ್ ಮೂರರಂದು ರಾಷ್ಟ್ರವ್ಯಾಪಿ ಪಲ್ಸ್ ಪೊಲಿಯೋ ಲಸಿಕೆ ಅಭಿಯಾನದೊಂದಿಗೆ ದೇಶದಾದ್ಯಂತ ಪೊಲಿಯೋ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲಾ ಮಕ್ಕಳಿಗೂ ತಪ್ಪದೇ ಪೊಲಿಯೋ ಲಸಿಕೆ ಹಾಕಲಾಗುತ್ತದೆ. ಆರೋಗ್ಯದ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಸೇರಿ ಎಲ್ಲರೂ ಕೈಜೋಡಿಸಿದರೆ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆ. ಪೊಲಿಯೋ ಅಭಿಯಾನವನ್ನು ಪ್ರತಿ ವರ್ಷವೂ ನಡೆಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್. ಅನಿಲ್ ಮಾತನಾಡಿ, ಪ್ರತಿ ವರ್ಷವೂ ಪಲ್ಸ್ ಪೊಲಿಯೋ ಲಸಿಕೆಯನ್ನು ಐದು ವರ್ಷದೊಳಗಿನ ಮಕ್ಕಳಿಗೆ ಹಾಕಿಸಲಾಗುತ್ತದೆ. ಈ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯುತ್ತದೆ. ಹಾಸನದಲ್ಲಿ ಐದು ವರ್ಷದ ಒಳಗಿನ ಮಕ್ಕಳು ೧,೧೭,೩೬೧ ಇರುವುದರಿಂದ ಹಾಸನದಲ್ಲಿ ೮೫೦ ಬೂತುಗಳನ್ನು ಹೊಂದಿರುತ್ತೇವೆ. ಲಸಿಕೆಯನ್ನು ಹಾಕಲು ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಅಧಿಕಾರಿಗಳು, ಲಸಿಕೆಯನ್ನು ಹಾಕಲಾಗುವುದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಹಾಗೆಯೇ ಪ್ರತಿ ಮನೆ ಮನೆಗಳಿಗೆ ತೆರಳಿ ಪೊಲಿಯೋ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.ಐಎನ್‌ಎ ನಿರ್ದೇಶಕ ಡಾ. ದಿನೇಶ್ ಬೈರೇಗೌಡ ಮಾತನಾಡಿ, ಭಾರತ ದೇಶವನ್ನು ಪೊಲಿಯೋ ಮುಕ್ತ ದೇಶ ಮಾಡಬೇಕು ತಪ್ಪದೇ ನವಜಾತ ಶಿಶುಗಳಿಂದ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿಸಬೇಕು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಹೆಚ್ಚು ಪೊಲಿಯೋ ಪ್ರಕರಣವನ್ನು ಕಾಣಬಹುದು. ಪ್ರತಿಯೊಬ್ಬರೂ ಲಸಿಕೆ ಹಾಕಿಸುವ ಮೂಲಕ ಪೊಲಿಯೋ ಮುಕ್ತ ಭಾರತವನ್ನಾಗಿ ಮಾಡಲು ಪಣ ತೊಡೋಣ ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳಾದ ಡಾ. ಎಚ್.ಸಿ. ಚೇತನ್, ಹಿಮ್ಸ್ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್.ಸಿ. ಲೋಕೇಶ್, ತಾಲೂಕು ಆರೋಗ್ಯ ಅಧಿಕಾರಿಗಳು ಡಾ. ಎನ್.ಡಿ. ವಿಜಯ ಗೊರೂರು, ಜಿಲ್ಲಾ ನಿರೂಪಣಾ ಅಧಿಕಾರಿಗಳು ಎಸ್. ಕುಮಾರ್, ಎಚ್‌ಒಡಿ ಮಕ್ಕಳ ವಿಭಾಗದ ಮನು ಪ್ರಕಾಶ್, ಹಿಮ್ಸ್ ಮಕ್ಕಳ ತಜ್ಞ ಶ್ರೀನಿವಾಸ್, ಡಾ. ಚನ್ನವೀರಪ್ಪ, ಡಾ. ವೆಂಕಟೇಶ್, ನಾಗೇಂದ್ರ, ಶ್ರೀಧರ್, ಹಿಮ್ಸ್‌ನ ಡಾ. ಸುಧಾ, ಶ್ರೀನಿವಾಸ್, ಉಮೇಶ್, ಕುಮಾರ್ ಇದ್ದರು. ಪ್ರಾರ್ಥನೆಯನ್ನು ಜಿಲ್ಲಾ ಆರೋಗ್ಯ ಇಲಾಖೆಯ ಗೀತಾ ನಡೆಸಿಕೊಟ್ಟರು. ಆರುಂಧತಿ ಸ್ವಾಗತಿಸಿದರು.ಫೋಟೋ: ಹಾಸನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಶಾಸಕ ಸ್ವರೂಪ್ ಚಾಲನೆ ನೀಡಿದರು.