ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆಗೆ ಸಜ್ಜು!

| Published : Oct 10 2023, 01:00 AM IST

ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜ್‌ ವಿದ್ಯಾರ್ಥಿಗಳಿಂದ ಪ್ರತಿಭಟನೆಗೆ ಸಜ್ಜು!
Share this Article
  • FB
  • TW
  • Linkdin
  • Email

ಸಾರಾಂಶ

ಉಪನ್ಯಾಸಕರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಕಾಲೇಜಿಗೆ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿಗಳು ಆಗಮಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಆಗ್ರಹಿಸಿ ಅ.10ರಂದು ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿಯಾಗಿ ಮೌನ ಪ್ರತಿಭಟನೆ ನಡೆಸಲಿದ್ದಾರೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಕಾಲೇಜು ಆರಂಭವಾಗಿ ಸುಮಾರು ಒಂದೂವರೆ ತಿಂಗಳು ಕಳೆದರೂ ಕೂಡ ಉಪನ್ಯಾಸಕರಿಲ್ಲದ ಪರಿಣಾಮ ನೊಂದಿರುವ ನಗರದ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಉಪನ್ಯಾಸಕರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಕಾಲೇಜಿಗೆ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿಗಳು ಆಗಮಿಸಿ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಆಗ್ರಹಿಸಿ ಅ.10ರಂದು ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿಯಾಗಿ ಮೌನ ಪ್ರತಿಭಟನೆ ನಡೆಸಲಿದ್ದಾರೆ. ಕಾಲೇಜಿನಲ್ಲಿ ಸುಮಾರು 507 ಮಂದಿ ವಿದ್ಯಾರ್ಥಿಗಳು ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದ ಪರಿಣಾಮ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕೆಲವೊಂದು ವಿಭಾಗದಲ್ಲಿ ಖಾಯಂ ಪ್ರಾಧ್ಯಾಪಕರು ಇಲ್ಲದಿರುವುದರಿಂದ ಅಂತಹ ವಿಷಯಗಳಿಗೆ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕಿದೆ. ಪ್ರತಿ ದಿನವೂ ಕಾಲೇಜಿಗೆ ತೆರಳಿ ಉಪನ್ಯಾಸಕರಿಲ್ಲದೆ ಯಾವುದೇ ತರಗತಿಗಳು ನಡೆಯದೆ ಮನೆಗೆ ತೆರಳುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ. ಪ್ರತಿಷ್ಠಿತ ಕಾಲೇಜಿನ ಪರಿಸ್ಥಿತಿ ಹೀಗಾದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಏನು ಎಂದು ಸಂಬಂಧಿಸಿದವರು ಚಿಂತಿಸಬೇಕಿದೆ. ಕಾಲೇಜಿನಲ್ಲಿ 1500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಠಡಿಗಳ ಕೊರತೆ, ಈಗ ಇರುವ ಕೊಠಡಿಗಳನ್ನು ದುರಸ್ತಿ ಮಾಡದೇ ಇರುವುದು, ಶೌಚಾಲಯದ ಸಮಸ್ಯೆ, ಭೂಗೋಳಶಾಸ್ತ್ರ ವಿಭಾಗದಲ್ಲಿ ಪ್ರಯೋಗಾಲಯ ಇಲ್ಲದಿರುವುದು, ಪತ್ರಿಕೋದ್ಯಮ ವಿಭಾಗದಲ್ಲಿ ಉಪಯುಕ್ತ ಉಪಕರಣಗಳಿಲ್ಲದಿರುವುದು, ಇಂಟರ್‌ನೆಟ್ ಸೌಲಭ್ಯದ ಕೊರತೆ, ನೀರಿನ ಸಮಸ್ಯೆ, ಕ್ರೀಡಾ ವಿಭಾಗದಲ್ಲಿ ಸಾಕಷ್ಟು ಕ್ರೀಡಾ ಸಾಮಾಗ್ರಿಗಳ ಕೊರತೆ ಇದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾಲೇಜಿನಲ್ಲಿ ಮೈದಾನ ನಿರ್ವಹಣೆ ಇಲ್ಲ, ವಾಹನ ಸೌಲಭ್ಯಗಳ ಕೊರತೆ ಕಂಡುಬಂದಿದೆ. ಇದರೊಂದಿಗೆ ಭದ್ರತೆ ಹಾಗೂ ಸ್ವಚ್ಛತೆಗೆ ಇದ್ದ ಸಿಬ್ಬಂದಿಗುತ್ತಿಗೆ ಕೂಡ ಕೊನೆಗೊಂಡಿದ್ದು, ಈಗ ಕೆಲಸ ಮಾಡಲು ಯಾರೂ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಆದಷ್ಟು ಬೇಗ ಕಾಲೇಜಿನ ಹಲವು ಸಮಸ್ಯೆಗಳನ್ನು ಕೊಡಗು ವಿಶ್ವ ವಿದ್ಯಾನಿಲಯ ಹಾಗೂ ಸರ್ಕಾರ ಬಗೆಹರಿಸಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಕಾಲೇಜಿನ ಬಹುತೇಕ ಎಲ್ಲ ವಿದ್ಯಾರ್ಥಿಗಳು ಕೂಡ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಗಳಿದೆ. ವಿವಿ ಸಮಸ್ಯೆಯಲ್ಲ, ಸರ್ಕಾರದ್ದು! ಕೊಡಗು ವಿಶ್ವ ವಿದ್ಯಾನಿಲಯ ಆರಂಭವಾಗಿ ಸುಮಾರು ಆರು ತಿಂಗಳು ಕಳೆದಿದೆ. ಈ ಹಿಂದಿನ ಸರ್ಕಾರ ರಾಜ್ಯದಲ್ಲಿ 7 ಹೊಸ ವಿ.ವಿ.ಗಳನ್ನು ಘೋಷಣೆ ಮಾಡಿತ್ತು. ಇದರಲ್ಲಿ ಕೊಡಗು ವಿ.ವಿ. ಕೂಡ ಒಂದಾಗಿದೆ. ಮಾತೃ ವಿಶ್ವ ವಿದ್ಯಾನಿಲಯ ಹಾಗೂ ನೂತನ ವಿದ್ಯಾನಿಲಯಗಳ ನಡುವಿನ ವರ್ಗಾವಣೆ ಪ್ರಕ್ರಿಯೆ ಸಂಪೂರ್ಣಗೊಳ್ಳದ ಪರಿಣಾಮದಿಂದಲೇ ಈ ರೀತಿಯ ಗೊಂದಲ ಉಂಟಾಗಿದೆ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ತ್ವರಿತವಾದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಇರುವುದರಿಂದ ಕೊಡಗು ವಿ.ವಿ.ಯ ಶೈಕ್ಷಣಿಕ ಚಟುವಟಿಕೆಯ ಮೇಲೆ ವ್ಯತಿರೀಕ್ತ ಪರಿಣಾಮ ಬೀರಿದೆ. ಸರ್ಕಾರ ಮಧ್ಯ ಪ್ರವೇಶ ಮಾಡಿ ವಿವಿ ನಡೆಸಲು ಅಗತ್ಯವಿರುವಷ್ಟು ಅನುದಾನವನ್ನು ಒದಗಿಸಬೇಕು. ಮಾತೃ ವಿಶ್ವ ವಿದ್ಯಾನಿಲಯದಿಂದ ನೂತನ ವಿವಿಗೆ ದೊರಕಬೇಕಾದ ಅನುದಾನವನ್ನು ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ. ಕಾಲೇಜು ಆರಂಭವಾಗಿ ಒಂದೂವರೆ ತಿಂಗಳಾಗಿದೆ. ಆದರೆ ನಮಗೆ ಪಾಠ ಮಾಡಲು ಉಪನ್ಯಾಸಕರಿಲ್ಲ. ಇದರಿಂದ ನಮ್ಮ ವ್ಯಾಸಂಗಕ್ಕೆ ತೊಂದರೆಯಾಗಿದೆ. ಆದ್ದರಿಂದ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದು, ಅ.10ರಂದು ಮೌನ ಪ್ರತಿಭಟನೆ ನಡೆಸಲಿದ್ದೇವೆ. । ವಿದ್ಯಾರ್ಥಿಗಳು, ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ.