ಸಾರಾಂಶ
-ಮಾದಿಗ ಸಮುದಾಯ ವಿದ್ಯಾರ್ಥಿಗಳಿಗೆ ಪುರಸ್ಕಾರ । ಸಿಎಂ ಸಿದ್ದರಾಮಯ್ಯ ಭಾಗಿ, ಎಚ್.ಆಂಜನೇಯ ಚಾರಿಟೇಬಲ್ ಟ್ರಸ್ಟ್ ನೇತೃತ್ವ।
ಸಿರಿಗೆರೆ ಶ್ರೀಗಳ ಸಾನ್ನಿಧ್ಯ।------
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎಚ್.ಆಂಜನೇಯ ಚಾರಿಟಿಬಲ್ ಟ್ರಸ್ಟ್ ಉದ್ಘಾಟನೆ ಶನಿವಾರ ಸಂಜೆ 4.30ಕ್ಕೆ ಚಿತ್ರದುರ್ಗದ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಟ್ರಸ್ಟಿ ಬಿ.ಆರ್.ರವಿವರ್ಮ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ತರಳಬಾಳು ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಎನ್.ವೈ.ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ್ ಭಾಗವಹಿಸುವರು.ಮೊದಲ ಹಂತದಲ್ಲಿ ಮಾದಿಗ ಸಮುದಾಯದ ಚಿತ್ರದುರ್ಗ-ದಾವಣಗೆರೆ ಜಿಲ್ಲೆಯ ಪ್ರತಿಭಾನ್ವಿತ ಶೇ 85 ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿಯಲ್ಲಿ 35, ಪಿಯುಸಿಯ 33 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಅತ್ಯಂತ ಕಡು ಬಡತನದ 6 ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಲ್ಯಾಪ್‍ಟ್ಯಾಪ್ ನೀಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬ್ಯಾಗ್, ನೋಟಬುಕ್, ಪ್ರಮುಖ ಕೃತಿಗಳು ಸೇರಿ ಕಲಿಕಾ ಸಾಮಗ್ರಿ ನೀಡಿ ಸನ್ಮಾನಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ರಾಜ್ಯಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ನೊಂದ ಜನರನ್ನು ಮುಖ್ಯವಾಹಿನಿಗೆ ತರಬೇಕೆಂಬ ಮಾಜಿ ಸಚಿವ ಎಚ್.ಆಂಜನೇಯ ಅವರ ಆಶಯವನ್ನು ಟ್ರಸ್ಟ್ ಮೂಲಕ ಮುನ್ನಲೆಗೆ ತರಲಾಗಿದೆ. ನಾವೆಲ್ಲರೂ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಆರಂಭದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.ದಾರ್ಶನಿಕರ ಆಶಯವನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಲು ಅಹಿಂದ ವರ್ಗದ ಕಣ್ಮಣಿ ಸಿದ್ದರಾಮಯ್ಯ ಅವರ 2013-18 ಅವಧಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗದ ಖಾತೆ ಸಚಿವರಾಗಿದ್ದ ಎಚ್.ಆಂಜನೇಯ ಶ್ರಮಿಸಿದ್ದು ಸದಾ ಸ್ಮರಣೀಯ ಎಂದರು.
ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಗುಣಮಟ್ಟದ ಹಾಸ್ಟೆಲ್ ಸೌಲಭ್ಯ, ಹೋಬಳಿಗೊಂದು ವಸತಿ ಶಾಲೆ, ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣ. ಹೀಗೆ ವಿವಿಧ ರೀತಿ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದ ಎಚ್.ಆಂಜನೇಯ ಅವರ ಬದ್ಧತೆ, ಕಾಳಜಿ ಮಾದರಿ ಆಗಿದ್ದು, ಅವರ ಆಶಯಗಳನ್ನು ಮುನ್ನಡೆಸಿಕೊಂಡು ಹೋಗಲು ಟ್ರಸ್ಟ್ ಸ್ಥಾಪಿಸಲಾಗಿದೆ ಎಂದು ಹೇಳಿದರು.ದೇಶದಲ್ಲಿಯೇ ಎಸ್ಸಿಎಸ್‍ಪಿ, ಟಿಎಸ್ಪಿ ಕಾಯ್ದೆ ಜಾರಿ ಮೂಲಕ ಗಮನ ಸೆಳೆದ ಎಚ್.ಆಂಜನೇಯ ಅವರ ಬದುಕೇ ಸದಾ ಸಂಘರ್ಷದ ಹಾದಿಯಲ್ಲಿ ಸಾಗಿ ಉನ್ನತ ಸ್ಥಾನಕ್ಕೇರಿರುವುದು ನೊಂದ ಜನರ ಪಾಲಿಗೆ ಉತ್ಸಾಹದ ಚಿಲುಮೆ ಆಗಿದೆ. ಐದು ದಶಕಗಳ ಕಾಲದ ಸಾಮಾಜಿಕ, ರಾಜಕೀಯ ಬದುಕಿನಲ್ಲಿ ಅನೇಕ ಸಂಕಷ್ಟ ಕಂಡಿದ್ದರೂ ಅವರ ಸಮಾಜಮುಖಿ ಚಿಂತನೆ, ಕಾರ್ಯಗಳಿಗೆ ಸಣ್ಣ ಧಕ್ಕೆಯೂ ಎದುರಾಗಿಲ್ಲದಿರುವುದು ವಿಸ್ಮಯ ಮತ್ತು ಮಾದರಿ ಆಗಿದೆ ಎಂದು ರವಿವರ್ಮ ಹೇಳಿದರು.
ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ, ಪ್ರತಿಯಾಗಿ ಸಮಾಜಕ್ಕೆ ಮರಳಿ ನಾವು ಕೂಡ ಕೊಡುಗೆ ನೀಡುವ ಮೂಲಕ ಋಣ ತೀರಿಸಬೇಕೆಂಬುದು ಎಚ್.ಆಂಜನೇಯ ಅವರ ಆಶಯ. ಅವರ ಹೆಸರಿನ ಟ್ರಸ್ಟ್ ಅನ್ನು ಕುಟುಂಬದ ಸದಸ್ಯರೆಲ್ಲರೂ ಸೇರಿ ಸ್ಥಾಪಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ತೀರ್ಮಾನಿಸಲಾಗಿದೆ ಎಂದರು.---------------
ಫೋಟೋ :--ತರಳಬಾಳು ಶ್ರೀ
--ಸಿದ್ದರಾಮಯ್ಯ-ಆಂಜನೇಯ